ರ‍್ಯಾನ್ಸಮ್ ವೇರ್ ಸೈಬರ್ ದಾಳಿ ತಡೆದ 22 ವರ್ಷದ ಯುವಕ
ಇಂಗ್ಲೆಂಡ್, ಮೇ 16 : ರ‍್ಯಾನ್ಸಮ್ ವೇರ್ ಸೈಬರ್ ದಾಳಿಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಬ್ರಿಟನ್ನಿನ 22ರ ಯುವಕ ಮಾರ್ಕಸ್ ಹಚ್ಚಿನ್ಸ್ ಈಗ ಭಾರೀ ಸುದ್ದಿಯಲ್ಲಿದ್ದಾರೆ. ಲಾಸ್ ಏಂಜಲಿಸ್ ಮೂಲದ ಕ್ರಿಪ್ಟೋಸ್ ಲಾಜಿಕ್ ಸಂಸ್ಥೆಯಲ್ಲಿ ಕೆಲಸ ಮಾಡುವ ಮಾರ್ಕಸ್ ತನ್ನನ್ನು ಹೀರೋ ಎಂದೇನೂ ಪರಿಗಣಿಸುವುದಿಲ್ಲ. ‘‘ನಾವು ಸರಿಯಾದುದನ್ನೇ ಮಾಡಿದ್ದೇವೆ’’ ಎಂದು ಹೇಳುತ್ತಾರೆ ಈ ಪ್ರತಿಭಾವಂತ ಯುವಕ. ಸುಮಾರು 150 ದೇಶಗಳನ್ನು ಬಾಧಿಸಿರುವ ಈ ವೈರಸ್ ದಾಳಿಯನ್ನು ತಡೆಯಲು ನೂರಾರು ಕಂಪ್ಯೂಟರ್ ತಜ್ಞರು ಕಳೆದ ವಾರ ಪೂರ್ತಿ ದುಡಿದಿದ್ದಾರೆ ಎಂದು ಅವರು ಹೇಳುತ್ತಾರೆ.
ಈ ವೈರಸ್ ದಾಳಿಯ ವೇಗವನ್ನು ನಿಯಂತ್ರಿಸಲು ಮಾರ್ಕಸ್ ಅವರು ‘ಕಿಲ್ ಸ್ವಿಚ್’ ಅಭಿವೃದ್ಧಿಪಡಿಸಿದ್ದು, ನಂತರ ಅದರ ಮುಖಾಂತರ ಬ್ರಿಟಿನ್ನಿನ ಹಾಸ್ಪಿಟಲ್ ನೆಟ್ ವರ್ಕನ್ನು ಹಾಗೂ ಇತರ ಕಂಪ್ಯೂಟರುಗಳನ್ನು ಬಾಧಿಸಿದ ವೈರಸ್ ದಾಳಿಯನ್ನು ತಡೆಯಲು ಮೂರು ದಿನಗಳ ಕಾಲ ಸತತ ಪ್ರಯತ್ನ ಮಾಡಿದ್ದರು
ನೋಂದಣಿ ಮಾಡಿಲ್ಲದ ವೆಬ್ ಅಡ್ರೆಸ್ ಒಂದರಿಂದ ಒಂದು ಕೋಡ್ ಗಮನಿಸಿದ್ದ ಮಾರ್ಕಸ್ ಆ ಡೊಮೈನನ್ನು ಕೂಡಲೇ ರಿಜಿಸ್ಟರ್ ಮಾಡಿದ್ದು ಆಗ ಆ ರ‍್ಯಾನ್ಸಮ್ ವೇರ್ ಹರಡುವುದು ನಿಂತಿದ್ದು ಅವರ ಗಮನಕ್ಕೆ ಬಂದಿತ್ತು.
ಮಾರ್ಕಸ್ ಅವರ ಕಾರ್ಯವನ್ನು ಅವರ ಕಂಪೆನಿ ಸಿಇಒ ಸಲೀಂ ನೀನೊ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಮಾರ್ಕಸ್ ಅವರು ಬಹು ಸಮಯದಿಂದ ಮಾಲ್‌ವೇರ್ ಟೆಕ್ ಎಂಬ ಟ್ವಿಟ್ಟರ್ ಹ್ಯಾಂಡಲ್ ನಿಂದ ಟ್ವೀಟ್ ಮಾಡುತ್ತಿದ್ದು, ಇದೀಗ ವಿಶ್ವದಾದ್ಯಂತ ಖ್ಯಾತಿ ಪಡೆದಿದ್ದಾರಲ್ಲದೆ ಎಫ್‌ಬಿಐ ಹಾಗೂ ಬ್ರಿಟಿಷ್ ಸೈಬರ್ ಸೆಕ್ಯುರಿಟಿ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದಾರೆ.
ಮಾರ್ಕಸ್ ಅವರು ದಕ್ಷಿಣ ಇಂಗ್ಲೆಂಡಿನಲ್ಲಿರುವ ಇಲ್ಫ್ರಾಕೋಂಬ್ ಎಂಬ ಪಟ್ಟಣದಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದು, ಮೂರು ದೊಡ್ಡ ಸ್ಕ್ರೀನ್ ಗಳಿರುವ ತಮ್ಮ ಕಂಪ್ಯೂಟರ್ ಮುಖಾಂತರ ಅವರು ತಮ್ಮ ಮನೆಯಿಂದಲೇ ಕಾರ್ಯಾಚರಿಸುತ್ತಿದ್ದಾರೆ. ಅವರ ತಾಯಿ ಜಾನೆಟ್ ನರ್ಸ್ ಆಗಿದ್ದಾರೆ.