ಸರಕಾರದ ಕಂಪ್ಯೂಟರ್ ಗೆ ಸೈಬರ್ ದಾಳಿ

Update: 2017-05-16 13:08 GMT

ಅಹ್ಮದಾಬಾದ್, ಮೇ 16: ‘ರ್ಯಾನ್ಸಮ್‌ವೇರ್’ ಸೈಬರ್ ದಾಳಿಯ ಪರಿಣಾಮ ಗುಜರಾತ್ ಸರಕಾರದ ವಿವಿಧ ಇಲಾಖೆಗಳ ಕಂಪ್ಯೂಟರ್ ವ್ಯವಸ್ಥೆ ತೊಂದರೆಗೊಳಗಾಗಿದೆ.

ಪ್ರಾದೇಶಿಕ ಸಾರಿಗೆ ಕಚೇರಿ, ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ, ಪೊಲೀಸ್ ಠಾಣೆ ಇತ್ಯಾದಿಗಳಲ್ಲಿರುವ ಕಂಪ್ಯೂಟರ್ ವ್ಯವಸ್ಥೆ ಸ್ಥಗಿತಗೊಂಡಿದೆ ಅಥವಾ ಇವುಗಳ ಕಾರ್ಯನಿರ್ವಹಣೆಯನ್ನು ತಡೆಹಿಡಿಯಲಾಗಿದೆ. ಆ್ಯಂಟಿ ವೈರಸ್‌ಗಳನ್ನು ಅಳವಡಿಸುವವರೆಗೆ ಎಲ್ಲಾ ಕಂಪ್ಯೂಟರ್‌ಗಳನ್ನು ಮತ್ತು ಐಟಿ ಜಾಲವ್ಯವಸ್ಥೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿ ಸರಕಾರ ಎಚ್ಚರದ ಸಂಕೇತ ರವಾನಿಸಿದೆ.

ರಾಜ್ಯದಾದ್ಯಂತ 120 ಕಂಪ್ಯೂಟರ್‌ಗಳ ಮೇಲೆ ಸೈಬರ್ ದಾಳಿ ಪ್ರಭಾವ ಬೀರಿದೆ. ಕೆಲವು ಪೊಲೀಸ್ ಠಾಣೆ ಹಾಗೂ ಅಹ್ಮದಾಬಾದ್ ಸರಕಾರಿ ಆಸ್ಪತ್ರೆಯ ಕಂಪ್ಯೂಟರ್ ವ್ಯವಸ್ಥೆಗೂ ಹಾನಿಯಾಗಿದೆ ಎಂದು ಐಟಿ ಇಲಾಖೆಯ ಕಾರ್ಯದರ್ಶಿ ಧನಂಜಯ್ ದ್ವಿವೇದಿ ತಿಳಿಸಿದ್ದಾರೆ.

ಕಂಪ್ಯೂಟರ್ ಬಳಸುವ ಮುನ್ನ ಅವುಗಳಿಗೆ ಭದ್ರತಾ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ಐಟಿ ಇಲಾಖೆ ಮತ್ತು ರಾಜ್ಯ ಅಪರಾಧ ದಾಖಲೆ ವಿಭಾಗವು ಎಲ್ಲಾ ಇಲಾಖೆಗಳಿಗೆ ಸಲಹೆ ನೀಡಿದೆ. ರಾಜ್ಯದ ಯಾವುದೇ ಖಾಸಗಿ ಸಂಸ್ಥೆಗಳ ಕಂಪ್ಯೂಟರ್ ವ್ಯವಸ್ಥೆಗೆ ಹಾನಿಯಾಗಿರುವ ಬಗ್ಗೆ ಇದುವರೆಗೆ ದೂರು ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News