ಹನಿಟ್ರ್ಯಾಪ್ ಪ್ರಕರಣ: ವೈದ್ಯನಿಂದ 14 ಲಕ್ಷ ರೂ. ಲಪಟಾಯಿಸಿದ ಮೂವರ ಸೆರೆ

Update: 2017-05-16 14:31 GMT

ಮಂಗಳೂರು, ಮೇ 16: ಯುವತಿಯನ್ನು ಮುಂದಿಟ್ಟುಕೊಂಡು ‘ಹನಿಟ್ರ್ಯಾಪ್’ ಮೂಲಕ ವೈದ್ಯನಿಂದ 14 ಲಕ್ಷ ರೂ. ಲಪಟಾಯಿಸಿದ ಮೂವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಯುವತಿ ಸಹಿತ ಹಲವು ಮಂದಿಯನ್ನು ಶೀಘ್ರ ಬಂಧಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ತಿಳಿಸಿದ್ದಾರೆ.

ಮಂಗಳವಾರ ತನ್ನ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಉಳ್ಳಾಲ ಮಾಸ್ತಿಕಟ್ಟೆಯ ಮುಹಮ್ಮದ್ ರಿಮ್‌ಝಿ (23), ಉಳ್ಳಾಲ ಧರ್ಮನಗರದ ಹಸನ್ ಸಾದಿಕ್ ಇಕ್ಬಾಲ್ (30), ಸೋಮೇಶ್ವರ ನಾರಾಯಣ ಸಾಲ್ಯಾನ್ (52) ಬಂಧಿತ ಆರೋಪಿಗಳು. ಕೃತ್ಯದಲ್ಲಿ ಯುವತಿ ಹಾಗೂ ರಾಕೇಶ್ ಸಹಿತ ಇನ್ನೂ ಕೆಲವು ಮಂದಿ ಭಾಗಿಗಳಾಗಿದ್ದಾರೆ ಎಂದರು.

ಉಳ್ಳಾಲ ಮಾಸ್ತಿಕಟ್ಟೆಯ ಮುಹಮ್ಮದ್ ರಿಮ್‌ಝಿ (23) ಎಂಬಾತ ಮೇ 2ರಂದು ಯುವತಿಯೊಬ್ಬಳನ್ನು ಮುಂದಿಟ್ಟುಕೊಂಡು ಮಂಗಳೂರಿನ ವೈದ್ಯರನ್ನು ಹನಿಟ್ರಾಪ್ ನಡೆಸಿದ. ಕದ್ರಿ ಮಲ್ಲಿಕಟ್ಟೆಯಿಂದ ವೈದ್ಯರು ತನ್ನ ಕಾರಿನಲ್ಲಿ ಯುವತಿಯ ಜೊತೆ ತೆರಳುತ್ತಿದ್ದಂತೆಯೇ ಪೊಲೀಸರ ಸೋಗಿನಲ್ಲಿ ಬಂದ ಸಾದಿಕ್ ಮತ್ತಿತರರು ವೈದ್ಯರನ್ನು ಬೆದರಿಸಿ ಸೋಮೇಶ್ವರಕ್ಕೆ ಕರೆದೊಯ್ದರು. ಅಲ್ಲಿನ ಮನೆಯೊಂದರ ಕೊಠಡಿಯಲ್ಲಿ ಕೂಡಿ ಹಾಕಿ ವಿವಸ್ತ್ರಗೊಳಿಸಿ ಬಲವಂತವಾಗಿ ಯುವತಿಯ ಜೊತೆ ವಿವಿಧ ಭಂಗಿಯಲ್ಲಿ ಫೋಟೋ ತೆಗೆಸಿದರು. ಆ ಬಳಿಕ ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡಿ ಕೊಲೆ ಬೆದರಿಕೆ ಹಾಕಿದರು. ಆರ್‌ಟಿಜಿಎಸ್ ಮೂಲಕ 14 ಲಕ್ಷ ರೂ.ವನ್ನು ಮುಹಮ್ಮದ್ ರಿಮ್‌ಝಿ ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡ. ಅಲ್ಲದೆ ವೈದ್ಯರ ಕ್ರೆಡಿಟ್ ಕಾರ್ಡ್ ಬಳಸಿ ಸುಮಾರು 3 ಲಕ್ಷ ರೂ. ವೌಲ್ಯದ ಸೊತ್ತುಗಳನ್ನು ಆರೋಪಿಗಳು ಖರೀದಿಸಿದ್ದರು.

ಕೆಲವು ದಿನದ ಬಳಿಕ ರಿಮ್‌ಝಿ ಮತ್ತೆ ಹಣಕ್ಕಾಗಿ ಬೇಡಿಕೆ ಇಟ್ಟಾಗ ದಿಕ್ಕುದೋಚದ ವೈದ್ಯ ಡಾ. ಚಿದಾನಂದ ಮೂರ್ತಿ ಕದ್ರಿ ಠಾಣೆಗೆ ದೂರು ನೀಡಿದರು. ಕದ್ರಿ ಇನ್‌ಸ್ಪೆಕ್ಟರ್ ಮಾರುತಿ ನಾಯಕ್ ಉಪಾಯದಿಂದ ಆರೋಪಿಗಳನ್ನು ನಂತೂರು-ಪಂಪ್‌ವೆಲ್ ರಸ್ತೆಗೆ ಕರೆಸಿ ಬಲೆಗೆ ಕೆಡವಿದರು. ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರ ಪತ್ತೆಗಾಗಿ ಕ್ರಮ ಜರಗಿಸಲಾಗಿದೆ ಎಂದರು.

ಶೂಟೌಟ್ ಪ್ರಕರಣ: ಮುತ್ತಪ್ಪ ರೈ ಮತ್ತು ರಾಕೇಶ್ ಮಲ್ಲಿಯ ಮೇಲೆ ಶೂಟೌಟ್ ಮಾಡಿದ ಆರೋಪ ಎದುರಿಸುತ್ತಿದ್ದ ನಾರಾಯಣ ಸಾಲ್ಯಾನ್ ಕೆಲವು ವರ್ಷದಿಂದ ಯಾವುದೇ ಪ್ರಕರಣದಲ್ಲಿ ತೊಡಗಿಸಿಕೊಂಡಿರಲಿಲ್ಲ. ಇದೀಗ ‘ಹನಿಟ್ರಾಪ್’ ಪ್ರಕರಣದಲ್ಲಿ ಸಿಲುಕಿದ್ದಾನೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News