×
Ad

ಚೂರಿಯಿಂದ ಇರಿದು ಸಹೋದರನನ್ನೇ ಕೊಂದ ಯುವಕ

Update: 2017-05-16 20:21 IST

ಬಂಟ್ವಾಳ, ಮೇ 16: ಮನೆಯೊಳಗೆ ನುಗ್ಗಿದ ಯುವಕನೊಬ್ಬ ತನ್ನ ಚಿಕ್ಕಪ್ಪನ ಮಗನನ್ನೇ ಚೂರಿಯಿಂದ ಇರಿದು ಕೊಲೆ ನಡೆಸಿರುವ ಘಟನೆ ತಾಲೂಕಿನ ಬಾಳ್ತಿಲ ಗ್ರಾಮದ ಕೊಡಂಗೆಕೋಡಿ ಎಂಬಲ್ಲಿ ನಡೆದಿದೆ.

ಕೊಡಂಗೆಕೋಡಿ ನಿವಾಸಿ ಗಣೇಶ್ ಎಂಬವರ ಪುತ್ರ ರಂಜಿತ್(28) ಕೊಲೆಯಾದವರು. ರಂಜಿತ್‌ನ ದೊಡ್ಡಪ್ಪನ ಮಗ ನವೀನ್ ಅಲಿಯಾಸ್ ರಾಜೇಶ್ (24) ಕೊಲೆ ನಡೆಸಿರುವ ಆರೋಪಿ.

ಸೋಮವಾರ ರಾತ್ರಿ 12 ಗಂಟೆ ಸುಮಾರಿಗೆ ಮನೆಯೊಳಗೆ ನುಗ್ಗಿದ ಆರೋಪಿ ರೂಂನಲ್ಲಿ ಮಲಗಿದ್ದ ರಂಜಿತ್‌ಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ. ಕುತ್ತಿಗೆ ಮತ್ತು ಗಂಟಲಿನ ಭಾಗಕ್ಕೆ ಆಳವಾದ ಗಾಯವಾದ ಕಾರಣ ರಂಜಿತ್ ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ಸಾಗಿಸುವ ಮೊದಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಸಂಜೆ ಬಾರಿನಲ್ಲಿ ಕುಡಿಯುತ್ತಿದ್ದ ವೇಳೆ ರಂಜಿತ್ ಮತ್ತು ರಾಜೇಶ್ ನಡುವೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಿತ್ತು. ಅಲ್ಲದೆ ಈ ಹಿಂದೆ ಕೂಡಾ ಕೋಳಿ ಅಂಕಕ್ಕೆ ಸಂಬಂಧಿಸಿಯೂ ಜಗಳ ನಡೆದಿತ್ತು ಎನ್ನಲಾಗಿದೆ. ಈ ದ್ವೇಷದಿಂದ ನಿನ್ನೆ ರಾತ್ರಿ ಗಣೇಶ್‌ರ ಮನೆಗೆ ನುಗ್ಗಿದ ಆರೋಪಿ ಮಲಗಿದ್ದ ರಂಜಿತ್‌ನಿಗೆ ಚೂರಿಯಿಂದ ಇರಿದಿದ್ದಾನೆ.

ಆರೋಪಿ ರಾಜೇಶ್ ಮನೆಯೊಳಗೆ ನುಗ್ಗಿದ ವೇಳೆ ರಂಜಿತ್‌ನ ತಂದೆ ಮತ್ತು ತಾಯಿ ಆತನನ್ನು ತಡೆದಿದ್ದು ಈ ವೇಳೆ ಅವರ ಮೇಲೂ ಆತ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಇಬ್ಬರಿಗೂ ಸಣ್ಣ ಪುಟ್ಟ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಘಟನೆಯ ಬಳಿಕ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ, ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ.ಆರ್., ವೃತ್ತ ನಿರೀಕ್ಷಕ ಮಂಜಯ್ಯ, ನಗರ ಠಾಣೆ ಎಸ್ಸೈ ರಕ್ಷಿತ್ ಎ.ಕೆ. ಹಾಗೂ ಅವರ ಸಿಬ್ಬಂದಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News