ಪ್ರತೀ ವಾರ ವರದಿ ನೀಡಲು ಜಿಪಂ ಅಧ್ಯಕ್ಷೆ ಸೂಚನೆ
ಮಂಗಳೂರು ಮೇ 16: ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿಗಳ ಪ್ರಗತಿಯ ಬಗ್ಗೆ ಪ್ರತೀ ವಾರ ತನಗೆ ವರದಿ ನೀಡುವಂತೆ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸೂಚಿಸಿದ್ದಾರೆ.
ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿಗಳ ಅನುಷ್ಠಾನದಲ್ಲಿ ತೀವ್ರ ವಿಳಂಭವಾಗುತ್ತಿದೆ. ಈಗಾಗಲೇ ಪೂರ್ಣಗೊಂಡಿರುವ ಘಟಕಗಳಿಗೆ ವಿದ್ಯುತ್ ಸಂಪರ್ಕ ಸೇರಿದಂತೆ ಅಂತಿಮ ಹಂತದ ಮೂಲಸೌಕರ್ಯ ಕಲ್ಪಿಸದಿರುವುದರಿಂದ ಸಾರ್ವಜನಿಕರಿಗೆ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯ ಸದ್ಯದ ಸಂದರ್ಭದಲ್ಲಿ ಶುದ್ಧ ನೀರು ಘಟಕಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸಬೇಕಾಗಿತ್ತು. ಆದರೆ ಜಿಲ್ಲೆಯಲ್ಲಿ ಶುದ್ಧ ನೀರು ಘಟಕಗಳ ಅನುಷ್ಠಾನ ವಹಿಸಿಕೊಂಡಿರುವ ಕೆಆರ್‌ಐಡಿಎಲ್ ಸಂಸ್ಥೆಯ ವಿಳಂಬ ಧೋರಣೆಯಿಂದ ಜಿಲ್ಲೆಯಲ್ಲಿ ಯೋಜನೆಯ ಸಮರ್ಪಕ ಅನುಷ್ಠಾನವಾಗುತ್ತಿಲ್ಲ ಎಂದು ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಜಿಪಂ ಸಿಇಒ ಡಾ.ಎಂ.ಆರ್.ರವಿ, ಕೆಆರ್‌ಐಡಿಎಲ್ ಸಂಸ್ಥೆಯ ಕಾರ್ಯಕಾರಿ ಅಭಿಯಂತರರ ಕಾರ್ಯವೈಖರಿ ಬಗ್ಗೆ ಈಗಾಗಲೇ ಉನ್ನತ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ಅಧಿಕಾರಿಯನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದ್ದು, ಉಡುಪಿ ಜಿಲ್ಲೆಯ ಇಇ ಅವರಿಗೆ ಪ್ರಭಾರ ವಹಿಸಲಾಗಿದೆ ಎಂದು ಹೇಳಿದರು.
ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಯಲ್ಲಿ ನೀರು ನಿಂತು ಸಮಸ್ಯೆಯಾಗದಂತೆ ಮತ್ತು ಕೃತಕ ನೆರೆಗಳುಂಟಾಗದಂತೆ ರಸ್ತೆ ಬದಿಗಳಲ್ಲಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಹಾಗೂ ಚರಂಡಿಗಳ ಹೂಳೆತ್ತಲು ತಕ್ಷಣವೇ ಕ್ರಮ ವಹಿಸುವಂತೆ ಗ್ರಾಪಂ ಪಿಡಿಒಗಳಿಗೆ ನಿರ್ದೇಶಿಸಿದರು.
ನಗರದ ಕಪಿತಾನಿಯೋ ಎಂಬಲ್ಲಿ ಸರಕಾರಿ ಶಾಲೆಗೆ ಹೋಗುವ ರಸ್ತೆಯಲ್ಲಿ ಮರಳು, ಜಲ್ಲಿಗಳನ್ನು ನಿರಂತರವಾಗಿ ಸುರಿದು ಹಾಗೂ ವಾಹನಗಳನ್ನು ನಿಲ್ಲಿಸಿ ತೊಂದರೆ ನೀಡುತ್ತಿರುವ ಬಗ್ಗೆ ದೂರು ಬಂದಿದ್ದು, ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಲು ಜಿಪಂ ಅಧ್ಯಕ್ಷರು ಸೂಚಿಸಿದರು. ಮಲೇರಿಯಾ ನಿಯಂತ್ರಣಕ್ಕೆ ತರಿಸಲಾಗುವ ಸೊಳ್ಳೆ ಪರದೆಗಳನ್ನು ಆರೋಗ್ಯ ಇಲಾಖೆಯು ಅಗತ್ಯವಿರುವ ಕಡೆ ತೆರಳಿ ವಿತರಿಸುವಂತೆ ತಿಳಿಸಿದ ಅವರು, ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಆರಂಭಿಸುವುದರಿಂದ ಅಂಗನವಾಡಿಗಳಲ್ಲಿ ಸಿಗುವ ಸೌಲಭ್ಯದಿಂದ ಪುಟಾಣಿಗಳು ವಂಚಿತರಾಗುತ್ತಿದ್ದು, ಇನ್ನು ಮುಂದೆ ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಆರಂಭಿಸಲು ಅನುಮತಿ ನೀಡದಂತೆ ಅಧ್ಯಕ್ಷರು ಸೂಚಿಸಿದರು.
ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ ಉಪಸ್ಥಿತರಿದ್ದರು.