×
Ad

ಲಾಡೆನ್‌ ಹೆಸರಿನಲ್ಲಿ ಆಧಾರ ಕಾರ್ಡ್ ಮಾಡಿಸಲು ಪ್ರಯತ್ನಿಸಿದ ವ್ಯಕ್ತಿ ಮಾನಸಿಕ ಅಸ್ವಸ್ಥನಲ್ಲ

Update: 2017-05-16 20:40 IST

ಜೈಪುರ,ಮೇ 16: ಹತ ಅಲ್-ಕಾಯದಾ ಸ್ಥಾಪಕ ಒಸಾಮಾ ಬಿನ್ ಲಾಡೆನ್‌ನ ಆಧಾರ ಕಾರ್ಡ್ ಮಾಡಿಸಲು ಪ್ರಯತ್ನಿಸಿದ್ದಕ್ಕಾಗಿ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ಬಂಧಿಸಲ್ಪಟ್ಟಿರುವ ವ್ಯಕ್ತಿ ಕೇವಲ ಕುತೂಹಲದಿಂದ ಆ ಕೃತ್ಯಕ್ಕೆ ಮುಂದಾಗಿದ್ದ ಮತ್ತು ಆತ ಮಾನಸಿಕವಾಗಿ ಸ್ವಸ್ಥನಾಗಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ಆಪರೇಟರ್ ಸದ್ದಾಂ ಮನ್ಸೂರಿಯನ್ನು ಇಂದು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ. ಮನ್ಸೂರಿಯ ವಿರುದ್ಧ ಈ ಹಿಂದೆ ಯಾವುದೇ ಅಪರಾಧ ಪ್ರಕರಣಗಳಿಲ್ಲ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆತನ ಮಾನಸಿಕ ಸ್ಥಿತಿ ಉತ್ತಮವಾಗಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಆತನ ವಿರುದ್ಧ ಆರೋಪ ಪಟ್ಟಿ ಸಿದ್ಧಗೊಳ್ಳುತ್ತಿದೆ ಎಂದು ಪಂಚಕುಲಾದ ಡಿಎಸ್‌ಪಿ ಚಂಚಲ್ ಮಿಶ್ರಾ ತಿಳಿಸಿದರು.

ತಾನು ಅಮಾಯಕ ಎಂದು ನ್ಯಾಯಾಲಯದಲ್ಲಿ ಹೇಳಿಕೊಂಡ ಮನ್ಸೂರಿ, ತನ್ನ ವಿರುದ್ಧದ ಎಲ್ಲ ಆರೋಪಗಳು ನಿರಾಧಾರವಾಗಿವೆ. ಆಧಾರ್ ಕಾರ್ಡ್ ಪಡೆಯಲು ಬೇರೆ ಯಾರೋ ಅಗತ್ಯ ವಿವರಗಳನ್ನು ಅಪ್‌ಲೋಡ್ ಮಾಡಿರಬಹುದು ಎಂದು ಪ್ರತಿಪಾದಿಸಿದ. ಆದರೆ ಈ ಪ್ರಕ್ರಿಯೆಯಲ್ಲಿ ಬಳಸಲಾಗಿದ್ದ ಯೂಸರ್ ಐಡಿ ಮನ್ಸೂರಿಯದ್ದೇ ಆಗಿತ್ತು ಎನ್ನುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮನ್ಸೂರಿ ಕೇವಲ ಕುತೂಹಲದಿಂದ ಈ ಕೃತ್ಯವನ್ನೆಸಗಿದ್ದ ಎನ್ನುವುದು ನಮ್ಮ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದ್ದು, ಸದ್ಯದ ಮಟ್ಟಿಗೆ ಬೇರೆ ಯಾವುದೇ ಉದ್ದೇಶ ಆತನಿಗಿರಲಿಲ್ಲ ಎಂಬಂತೆ ಕಂಡು ಬರುತ್ತಿದೆ. ಆತ ಆಧಾರ ಕಾರ್ಡ್ ಮಾಡಿಸಿರುವ ಎಲ್ಲರ ಹೆಸರುಗಳನ್ನು ಮತ್ತು ವಿವರಗಳನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಮಿಶ್ರಾ ತಿಳಿಸಿದರು.

ಆಸಕ್ತಿಪೂರ್ಣ ಅಂಶವೆಂದರೆ ಲಾದೆನ್‌ನ ಆಧಾರ ಕಾರ್ಡ್ ಪಡೆಯಲು ನೀಡಿದ್ದ ವಿಳಾಸ ಪಾಕಿಸ್ತಾನದಲ್ಲಿ ಆತನ ಅಡಗುದಾಣವಾಗಿದ್ದ ಅಬ್ಬತಾಬಾದ್ ಪಟ್ಟಣದ್ದಾಗಿತ್ತು. ಫಾರ್ಮ್ ಜೊತೆ ಲಾದೆನ್‌ನ ಚಿತ್ರವನ್ನೂ ಮನ್ಸೂರಿ ಅಪ್‌ಲೋಡ್ ಮಾಡಿದ್ದ. ಮನ್ಸೂರಿಯನ್ನು ಸೋಮವಾರ ಭಿಲ್ವಾರಾ ಪೊಲಿಸರು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News