ಫ್ಯಾಸಿಸ್ಟ್ ಬಿಜೆಪಿ ನಾಯಕರೆದುರು ಶರಣಾಗುವುದಿಲ್ಲ : ಲಾಲು ಪ್ರಸಾದ್
Update: 2017-05-16 20:46 IST
ಹೊಸದಿಲ್ಲಿ,ಮೇ 16: ಅಘೋಷಿತ ಭೂವ್ಯವಹಾರಗಳಲ್ಲಿ ತನ್ನ ಪಾತ್ರವನ್ನು ನಿರ್ಧರಿಸಲು ಆದಾಯ ತೆರಿಗೆ ಅಧಿಕಾರಿಗಳು 22 ಸ್ಥಳಗಳಲ್ಲಿ ದಾಳಿಗಳು ಮತ್ತು ಸಮೀಕ್ಷೆಗಳನ್ನು ನಡೆಸಿದ ಬಳಿಕ ಬಿಜೆಪಿಗೆ ತಿರುಗೇಟು ನೀಡಿರುವ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ ಅವರು, ತಾನು ಫ್ಯಾಸಿಸ್ಟ್ ಬಿಜೆಪಿ ನಾಯಕರೆದುರು ಶರಣಾಗುವುದಿಲ್ಲ ಎಂದು ಟ್ವೀಟಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, ‘‘ಶರಣಾಗತಿಯಲ್ಲಿ ಅಥವಾ ಹೆದರಿಕೊಳ್ಳುವುದರಲ್ಲಿ ಲಾಲು ಪ್ರಸಾದ್ ನಂಬಿಕೆಯಿಟ್ಟಿಲ್ಲ. ನನ್ನ ಕೊನೆಯುಸಿರು ಇರುವವರೆಗೂ ಈ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಡುತ್ತಲೇ ಇರುತ್ತೇನೆ ’’ ಎಂದು ಹೇಳಿದ್ದಾರೆ.
ಇಂತಹ ಸೋಗಿನ ತನಿಖೆಗಳ ಫಲಿತಾಂಶದ ಬಗ್ಗೆ ಬಿಜೆಪಿ ಜೊಲ್ಲು ಸುರಿಸುವುದು ಬೇಡ ಮತ್ತು ಆರ್‌ಜೆಡಿ-ಜೆಡಿಯು ಮೈತ್ರಿಯು ಅಭೇದ್ಯವಾಗಿದೆ ಎಂದಿರುವ ಅವರು, ಬಿಜೆಪಿಯ ರಾಜಕೀಯ ತಂತ್ರಗಳಿಗೆ ತಾನು ಹೆದರಿಕೊಂಡಿಲ್ಲ ಎಂದಿದ್ದಾರೆ.