ಆಸ್ಪತ್ರೆಯಲ್ಲಿ ರೋಗಿ ಮೃತ್ಯು: ಆಕ್ರೋಶಿತ ಸಂಬಂಧಿಕರಿಂದ ವೈದ್ಯರ ಅಪಹರಣ!
ಉಳ್ಳಾಲ, ಮೇ 16: ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರು ಮೃತಪಟ್ಟಿದ್ದು, ಇದರಿಂದ ಆಕ್ರೋಶಗೊಂಡ ಮೃತರ ಸಂಬಂಧಿಕರು ವೈದ್ಯರನ್ನು ಅಪಹರಿಸಿರುವ ಘಟನೆ ದೇರಳಕಟ್ಟೆಯಲ್ಲಿ ನಡೆದಿದೆ.
ಘಟನೆ ವಿವರ: ತಲಪಾಡಿ ಸಮೀಪದ ಕಿನ್ಯಾ ನಿವಾಸಿ ಬಾವು (65) ಎಂಬವರನ್ನು ಸೋಮವಾರ ಮಧ್ಯಾಹ್ನ ದೇರಳಕಟ್ಟೆಯ ಯೆನೆಪೊಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯ ಸಂಬಂಧಿ ಕಾಯಿಲೆ ಮತ್ತು ತೀವ್ರ ಮಧುಮೇಹದಿಂದ ಬಳಲುತ್ತಿದ್ದ ಬಾವು ಅವರ ಸ್ಥಿತಿ ಚಿಂತಾಜನಕವಾಗಿತ್ತು. ಈ ನಡುವೆ ಔಷಧಿಗಾಗಿ ಹಣ ತರಲೆಂದು ಬಾವು ಅವರ ಪುತ್ರ ಮಹಮ್ಮದ್ ಆಸಿಫ್ ತೆರಳಿದ್ದು, ಮನೆಯಿಂದ ವಾಪಸಾಗುವ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಬಾವು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬಾವು ಅವರ ಪುತ್ರ ಆಸಿಫ್ ವೈದ್ಯರ ನಿರ್ಲಕ್ಷ್ಯದಿಂದಲೇ ತನ್ನ ತಂದೆ ಸಾವನ್ನಪ್ಪಿರುವುದಾಗಿ ದೂರಿದ್ದರು.
ದಾಂಧಲೆ: ಆರೋಪ
ಮೃತರ ಸಂಬಂಧಿಕರ ಗುಂಪೊಂದು ಆಸ್ಪತ್ರೆಗೆ ದಾಳಿ ನಡೆಸಿ ಕರ್ತವ್ಯ ನಿರತ ದಾದಿ ಫ್ಲೋರೆನ್ಸ್(50), ವೈದ್ಯರಾದ ಡಾ. ಶ್ರೀಕರ ರಾವ್, ಡಾ. ಅಭಿಜಿತ್ ಶೆಟ್ಟಿ ಮತ್ತು ಸೆಕ್ಯುರಿಟಿ ಸಿಬ್ಬಂದಿ ಗಣೇಶ್ ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿ ದೂರಿದ್ದಾರೆ. ಇದೇ ಸಂದರ್ಭ ತಂಡವು ವೈದ್ಯ ಡಾ.ಅಭಿಜಿತ್ ಶೆಟ್ಟಿಯವರನ್ನು ಎಳೆದುಕೊಂಡು ಬಂದು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಡಾ.ಅಭಿಜಿತ್ ಶೆಟ್ಟಿಯಿದ್ದ ವಾಹನವನ್ನು ವೈದ್ಯರ ತಂಡ ಮತ್ತು ಸೆಕ್ಯುರಿಟಿ ಸಿಬ್ಬಂದಿ ಹಿಂಬಾಲಿಸಿದ್ದರು. ಉಳ್ಳಾಲದ ಅಬ್ಬಕ್ಕ ವೃತ್ತ ತಲುಪುತ್ತಿದ್ದಂತೆ ಮಾಹಿತಿ ಪಡೆದಿದ್ದ ಉಳ್ಳಾಲ ಪೊಲೀಸರು ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿದ್ದು, ಈ ಸಂದರ್ಭ ತಂಡದಲ್ಲಿದ್ದ ಇಬ್ಬರು ಪರಾರಿಯಾಗಿದ್ದಾರೆ. ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ತಂಡದ ಮೇಲೆ ದರೋಡೆ, ಅಪಹರಣ, ಕೊಲೆಯತ್ನ ಹಾಗೂ ಸೊತ್ತುಗಳಿಗೆ ಹಾನಿಗೈದ ಕಾಯ್ದೆಯಡಿ ಪ್ರಕರಣ ದಾಖಲಿಸಿದ ಪೊಲೀಸರು, ಮೃತ ಬಾವು ಅವರ ಪುತ್ರ ಮಹಮ್ಮದ್ ಆಸೀಫ್ ಹಾಗೂ ಸಂಬಂಧಿಕರಾದ ಮಹಮ್ಮದ್ ವೈಸ್ , ಅಬ್ದುಲ್ ಖಾದರ್ ನೌಫಾಲ್ ಎಂಬವರನ್ನು ಬಂಧಿಸಿದ್ದಾರೆ.
ಬಾವು ಅವರ ಇನ್ನೋರ್ವ ಪುತ್ರ ಇಲ್ಯಾಸ್ ಎಂಬವರು ಉಳ್ಳಾಲ ಪೊಲೀಸ್ ಠಾಣೆಗೆ ವೈದ್ಯರ ನಿರ್ಲಕ್ಷದ ಬಗ್ಗೆ ದೂರು ನೀಡಿದ್ದು, ಈ ಬಗ್ಗೆಯೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.