ರಾಷ್ಟ್ರಪತಿ ಹುದ್ದೆಗೆ ಒಮ್ಮತದ ಅಭ್ಯರ್ಥಿ : ಸೋನಿಯಾ ಜೊತೆ ಮಮತಾ ಚರ್ಚೆ
ಹೊಸದಿಲ್ಲಿ, ಮೇ 16: ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ತೃಣಮೂಲ ಕಾಂಗ್ರೆಸ್ ಪಕ್ಷ(ಟಿಎಂಸಿ) ನಾಯಕಿ ಹಾಗೂ ಪ.ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಯಾವುದೇ ಹೆಸರು ಚರ್ಚೆಗೆ ಬರಲಿಲ್ಲ. ಆದರೆ ಈ ವಿಷಯದಲ್ಲಿ ಸಹಮತ ಅಗತ್ಯ ಎಂಬ ನಿರ್ಧಾರಕ್ಕೆ ಬರಲಾಯಿತು . ಎಲ್ಲಾ ವಿಪಕ್ಷಗಳೂ ಸಂಘಟಿತರಾಗಿ , ದೇಶದ ಒಳಿತು ಬಯಸುವ ಸಹಮತದ ಅಭ್ಯರ್ಥಿಯನ್ನು ಆರಿಸುವ ಅಗತ್ಯವಿದೆ ಎಂದು ಮಮತಾ ತಿಳಿಸಿದ್ದಾರೆ. ಇನ್ನೂ ಸಮಯವಿದೆ ಮತ್ತು ಇನ್ನೊಮ್ಮೆ ಸಭೆ ಸೇರಲಿದ್ದೇವೆ. ಸರಕಾರ ಕೂಡಾ ಸಹಮತದ ಅಭ್ಯರ್ಥಿಯ ಆಯ್ಕೆಯ ಕುರಿತು ಉಪಕ್ರಮಕ್ಕೆ ಮುಂದಾಗಬೇಕು ಎಂದು ಮಮತಾ ತಿಳಿಸಿದರು.
ರಾಷ್ಟ್ರಪತಿ ಹುದ್ದೆಗೆ ಪ್ರತಿಪಕ್ಷಗಳು ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ಉದ್ದೇಶದಿಂದ ಸೋನಿಯಾ ನಡೆಸುತ್ತಿರುವ ಸರಣಿ ಮಾತುಕತೆಯ ಮುಂದುವರಿದ ಭಾಗವಾಗಿ ಮಮತಾ ಬ್ಯಾನರ್ಜಿ ಜೊತೆ ಚರ್ಚೆ ನಡೆದಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡಾ ಈ ಸಂದರ್ಭ ಉಪಸ್ಥಿತರಿದ್ದರು. ಇದೇ ವೇಳೆ ಕೇಂದ್ರ ಸರಕಾರದ ವಿರುದ್ದದ ವಾಗ್ದಾಳಿ ಮುಂದುವರಿಸಿದ ಮಮತಾ, ಕೇಂದ್ರ ಸರಕಾರ ತನ್ನ ರಾಜಕೀಯ ವೈರಿಗಳ ವಿರುದ್ಧ ಹಗೆ ಸಾಧಿಸುತ್ತಿದೆ.
ವಿರೋಧಿಗಳ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವುದು , ಸಿಬಿಐ ಮತ್ತಿತರ ತನಿಖಾ ಸಂಸ್ಥೆಗಳಿಂದ ದಾಳಿ ನಡೆಸುವುದು, ವಿರೋಧಿಗಳ ವಿರುದ್ದ ಪ್ರಕರಣ ದಾಖಲಿಸುವುದು, ಜೈಲಿಗಟ್ಟುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ ಎಂದು ಹೇಳಿದರು.