ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಮಣಿಪಾಲದ ವಿದ್ಯಾರ್ಥಿನಿ ಪೂರ್ವಪ್ರಭಾ
ಮಣಿಪಾಲ, ಮೇ 16: ಮಣಿಪಾಲ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನ ಎರಡನೇ ಸೆಮಿಸ್ಟರ್ ವಿದ್ಯಾರ್ಥಿನಿ ಪೂರ್ವಪ್ರಭ ಪಾಟೀಲ್ ನ್ಯೂಯಾರ್ಕ್ ನಲ್ಲಿರುವ ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ನಡೆದ ಸುಸ್ಥಿರ ಅಭಿವೃದ್ಧಿಗಾಗಿ ವಿಜ್ಞಾನ, ತಂತ್ರಜ್ಞಾನ ಹಾಗೂ ಇನ್ನೋವೇಷನ್ (ಎಸ್‌ಟಿಐ)ನ ಮಲ್ಟಿ ಸ್ಟೇಕ್‌ಹೋಲ್ಡರ್ ಪೋರಂನ ಸಭೆಯಲ್ಲಿ ಏಷ್ಯ-ಫೆಸಿಪಿಕ್ ವಲಯವನ್ನು ಪ್ರತಿನಿಧಿಸಿ ಭಾಗವಹಿಸಿದ್ದಾರೆ.
ಮೇ 15 ಮತ್ತು 16ರಂದು ನಡೆದ ಈ ಸಮ್ಮೇಳನದಲ್ಲಿ ಏಷ್ಯ-ಫೆಸಿಪಿಕ್ ವಲಯವನ್ನು ಪ್ರತಿನಿಧಿಸಿದ ಏಕೈಕ ಪ್ರತಿನಿಧಿ ಪೂರ್ವಪ್ರಭ ಅವರಾಗಿದ್ದಾರೆ. ‘ಈ ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಪೂರ್ವಾ ವಿಶ್ವವಿದ್ಯಾನಿಲಯಕ್ಕೆ ದೊಡ್ಡ ಹೆಸರನ್ನು ತಂದಿದ್ದಾರೆ. ಅವರ ಸಾಧನೆಯ ಕುರಿತಂತೆ ನಮಗೆ ಅತೀವವಾದ ಹೆಮ್ಮೆ ಇದೆ.’ ಎಂದು ಮಣಿಪಾಲ ವಿವಿಯ ಕುಲಪತಿ ಡಾ. ಎಚ್. ವಿನೋದ್ ಭಟ್ ಹೇಳಿದ್ದಾರೆ.
ಉಳಿದಂತೆ ಈ ಸಮ್ಮೇಳನದಲ್ಲಿ ಅಮೆರಿಕ, ಬ್ರೆಜಿಲ್, ಈಜಿಪ್ಟ್ ಹಾಗೂ ಕೆನಡಾದ ಪ್ರತಿನಿಧಿಗಳು ಭಾಗವಿಸಿದ್ದಾರೆ. ವಿಶ್ವಸಂಸ್ಥೆಯ ಮೀಟ್‌ನಲ್ಲಿ ಪಡೆದ ಅಮೂಲ್ಯ ಅನುಭವವನ್ನು ಸದುಪಯೋಗ ಪಡಿಸಿಕೊಳ್ಳಲು ಸಾಧ್ಯವಾಗಲಿದೆ ಎಂಬ ನಂಬಿಕೆಯನ್ನು ಅವರು ಹೊಂದಿದ್ದಾರೆ.
ಪೂರ್ವ ಅವರ ಆಸಕ್ತಿಯ ಕ್ಷೇತ್ರ ಅನೇಕ. ಮಣಿಪಾಲದ ಸ್ಟುಡೆಂಟ್ ರಿಸರ್ಚ್ ಫೋರಂನ (ಕೆಎಂಸಿ- ಎಸ್‌ಆರ್‌ಎಫ್) ರಿಸರ್ಚ್ ಇಂಟರ್ನಿಯಾಗಿರುವ ಪೂರ್ವ, ಮಣಿಪಾಲ ರೆಡ್-ಎಕ್ಸ್, ಮಣಿಪಾಲ ಕಟ್ಟಿಂಗ್ ಎಡ್ಜ್, ಬಯೋಎಥಿಕ್ ಸಮಿತಿ ಸೇರಿದಂತೆ ಅನೇಕ ಸಮಿತಿಗಳ ಸದಸ್ಯೆಯಾಗಿದ್ದಾರೆ. ಕೆಎಂಸಿ ವಿದ್ಯಾರ್ಥಿ ಸಂಘದ ಸದಸ್ಯೆ, ವಿವಿಧ ಸೇವಾ ಸಂಘಗಳಲ್ಲೂ ಅವರು ಸಕ್ರಿಯರಾಗಿದ್ದಾರೆ. ಸಮುದಾಯ ಸೇವೆ, ಜ್ಯೋತಿ ಐ ಕೇರ್ ರತ್ನಗಿರಿ, ವೈಲ್ಡ್‌ಲೈಫ್ ಸರ್ವೈವರ್ ಎಂಬ ಎನ್‌ಜಿಒದಲ್ಲೂ ಕೆಲಸ ಮಾಡುತ್ತಿದ್ದಾರೆ. ಈ ಸಂಸ್ಥೆಯ ಮೂಲಕ ಅಪಾಯದಲ್ಲಿದ್ದ ಹಾವು, ನಾಯಿ ಸೇರಿದಂತೆ ನೂರಾರು ಪ್ರಾಣಿ, ಪಕ್ಷಿಗಳನ್ನು ರಕ್ಷಿಸಿ, ಉಪಚರಿಸಿ ಕಾಡಿನಲ್ಲಿ ಬಿಟ್ಟಿದ್ದಾರೆ.
ಯುನೈಟೆಡ್ ನೇಷನ್ಸ್ ಫೌಂಡೇಷನ್‌ನ ಸಮುದಾಯ ನಾಯಕಿಯಾಗಿ, 2015-16ನೇ ಸಾಲಿನಲ್ಲಿ ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಪೂರ್ವ ರೋಡ್ ಸ್ಟೇಟಿಂಗ್ ಮತ್ತು ರಿಂಕ್‌ನಲ್ಲಿ ರಾಷ್ಟ್ರೀಯ ಮಟ್ಟದ ಆಟಗಾರ್ತಿಯೂ ಆಗಿದ್ದಾರೆ. ಕುದುರೆ ಸವಾರಿಯ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆದ್ದಿದ್ದಾರೆ ಎಂದು ಮಣಿಪಾಲ ವಿವಿಯ ಪ್ರಕಟನೆ ತಿಳಿಸಿದೆ.