ಮಗು ಕಳ್ಳತನ ಆರೋಪ: ಮಹಿಳೆ ಪೊಲೀಸ್ ವಶ
ಉಡುಪಿ, ಮೇ 16: ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಇಂದು ಸಂಜೆ ತನ್ನ ಮಗುವನ್ನು ಮಹಿಳೆಯೊಬ್ಬರು ಕದ್ದುಕೊಂಡು ಹೋಗಿರುವುದಾಗಿ ಉಡುಪಿ ಮಹಿಳಾ ಪೊಲೀಸ್ ಠಾಣೆಗೆ ನೀಡಿರುವ ದೂರಿನಂತೆ ತನಿಖೆ ನಡೆಯುತ್ತಿದೆ.
ಹುಬ್ಬಳ್ಳಿ ಜಿಲ್ಲೆಯ ನರಗುಂದ ತಾಲೂಕಿನ ಮುತ್ತಣ್ಣ ಎಂಬವರು ಅನಾರೋಗ್ಯದ ಹಿನ್ನೆಲೆಯಲ್ಲಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳ ರೋಗಿಯಾಗಿ ದಾಖಲಾಗಿದ್ದರು. ಇವರ ಜೊತೆ ಪತ್ನಿ ಆಶಾ ಹಾಗೂ ಆರು ವರ್ಷದ ಮಗಳು ಐಶ್ವರ್ಯ ಕೂಡ ಇದ್ದರು. ಅಲ್ಲೇ ಪಕ್ಕದಲ್ಲಿ ಉಪ್ಪುಂದದ ನಾರಾಯಣ ಎಂಬವರೂ ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇವರ ಜೊತೆ ಪತ್ನಿ ಗೀತಾ (35) ಎಂಬವರು ಕೂಡ ಇದ್ದರು. ಇಂದು ಸಂಜೆ ನಾರಾಯಣ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಆ ವೇಳೆ ಆಶಾರ ಮಗಳು ಕೂಡ ನಾಪತ್ತೆಯಾಗಿದ್ದಳು.
ಇದರಿಂದ ಗಾಬರಿಗೊಂಡ ಆಶಾ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಮಹಿಳಾ ಪೊಲೀಸ್ ಠಾಣಾ ಸಿಬ್ಬಂದಿಗಳು ತನಿಖೆ ನಡೆಸಿದರು. ಗೀತಾ ತನ್ನ ಗಂಡ ಆಸ್ಪತ್ರೆಯಿಂದ ಬಿಡುಗಡೆಯಾಗುವ ವೇಳೆ ಆಶಾರ ಮಗುವನ್ನು ಕೂಡ ಕಿನ್ನಿಮುಲ್ಕಿಯಲ್ಲಿರುವ ತನ್ನ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿದ್ದರು ಎಂಬುದು ತಿಳಿದುಬಂತು. ಬಳಿಕ ಗೀತಾ ಮಗುವನ್ನು ಕರೆದುಕೊಂಡು ಆಶಾಗೆ ಒಪ್ಪಿಸಿದ್ದು, ಗೀತಾಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
‘ನಾನು ಮಗು ವನ್ನು ಮನೆಯಲ್ಲಿ ಸ್ನಾನ ಮಾಡಿಸಲೆಂದು ಕರೆದುಕೊಂಡು ಹೋಗಿದ್ದೇನೆ. ಬೇರೆ ಯಾವುದೇ ಉದ್ದೇಶದಿಂದಲ್ಲ’ ಎಂದು ಗೀತಾ ಪೊಲೀಸರಿಗೆ ಹೇಳಿದ್ದಾರೆ. ಮಗುವನ್ನು ನಮ್ಮ ಬಳಿ ಹೇಳದೆ ಕರೆದುಕೊಂಡು ಹೋಗಿದ್ದಾರೆಂಬುದು ಆಶಾ ಅವರ ದೂರು. ಈ ಬಗ್ಗೆ ಮಹಿಳಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.