ಮುಂದುವರಿದ ಸಾಮೂಹಿಕ ವಲಸೆ ಸಂಭಲ್ ಗ್ರಾಮ ತೊರೆಯುತ್ತಿರುವ ಮುಸ್ಲಿಮರು
ಲಕ್ನೊ, ಮೇ 16: ಅಂತರ್‌ಜಾತೀಯ ಪ್ರೇಮಿಗಳಿಬ್ಬರು ಮನೆ ಬಿಟ್ಟು ಓಡಿಹೋದ ಬಳಿಕ ಸಂಭವಿಸಿದ ಹಿಂಸಾಚಾರದಿಂದ ಕಂಗೆಟ್ಟಿರುವ ಸಂಭಲ್‌ನ ನಂದ್ರೌಲಿ ಗ್ರಾಮದ 33ಕ್ಕೂ ಹೆಚ್ಚು ಕುಟುಂಬದವರು ಊರು ತೊರೆದಿದ್ದಾರೆ.
ವಿವಾಹಿತ ಹಿಂದೂ ಮಹಿಳೆ ಮತ್ತು ಆಕೆಯ ಪ್ರೇಮಿ ಎನ್ನಲಾದ ಮುಸ್ಲಿಂ ಯುವಕನೋರ್ವ ಮೇ 8ರಂದು ಊರಿನಿಂದ ಪಲಾಯನ ಮಾಡಿದ್ದರು. ಈ ಘಟನೆಯ ಬಳಿಕ ಮೇ 9 ಮತ್ತು 10ರಂದು 10 ಮುಸ್ಲಿಂ ಕುಟುಂಬದ 55 ಮಂದಿ ಊರು ತೊರೆದಿದ್ದರು. ಘಟನೆಯ ಬಳಿಕ ಹಿಂದೂಗಳ ಬಾಹುಳ್ಯವಿರುವ ಗ್ರಾಮದಲ್ಲಿ ಮುಸ್ಲಿಮರ ಮನೆಗಳಿಗೆ ನುಗ್ಗಿ ಮನೆಯವರ ಮೇಲೆ ವ್ಯಾಪಕವಾಗಿ ಹಲ್ಲೆ ನಡೆಸಲಾಗಿದೆ.
ಮಹಿಳೆಯರು, ಮಕ್ಕಳೆನ್ನದೆ ಸಿಕ್ಕಸಿಕ್ಕವರನ್ನು ಅಮಾನುಷವಾಗಿ ಥಳಿಸಲಾಗಿದೆ. ಮೇ 10ರಂದು ರಾತ್ರಿ ಗುಂಪೊಂದು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲೇ 12ಕ್ಕೂ ಹೆಚ್ಚು ಮುಸ್ಲಿಮರ ಮನೆಗಳಿಗೆ ದಾಳಿ ನಡೆಸಿದೆ. ಮನೆಗಳನ್ನು ಲೂಟಿ ಮಾಡಿ ಬೆಂಕಿ ಹಚ್ಚಲಾಗಿದ್ದು ಮನೆಯವರು ಸಮೀಪದ ಅರಣ್ಯಕ್ಕೆ ಓಡಿ ಬಚಾವಾಗಿದ್ದಾರೆ. ಇದೀಗ ಮತ್ತೆ 33 ಮುಸ್ಲಿಂ ಕುಟುಂಬ ಊರು ಬಿಟ್ಟು ತೆರಳಿದೆ. ಹೀಗೆ ವಲಸೆ ಹೋದವರೆಲ್ಲಾ ಬದೌನ್, ಸಂಭಾಲ್ ಮತ್ತು ಆಲಿಗಡದಲ್ಲಿ ನೆಲೆಸಿದ್ದಾರೆ.
ಮುಸ್ಲಿಂ ಸಮುದಾಯದ ಸಾಮೂಹಿಕ ವಲಸೆಯನ್ನು ತಡೆಯಲು ಸ್ಥಳೀಯ ಸಂಸದರು ಸೇರಿದಂತೆ ಹಲವರು ನಡೆಸಿದ ಪ್ರಯತ್ನ ವಿಫಲವಾಗಿದೆ. ಗ್ರಾಮದಿಂದ ಪಲಾಯನಗೈದು ಬೇರೆಡೆ ನೆಲೆಸಿರುವ ಕುಟುಂಬಗಳ ಪಟ್ಟಿ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಊರಿಗೆ ಮರಳಿ ಬರುವಂತೆ ಅವರ ಮನ ಒಲಿಸಲಾಗುವುದು ಎಂದು ಉಪ ವಿಭಾಗೀಯ ದಂಡಾಧಿಕಾರಿ ಅಖಿಲೇಶ್ ಯಾದವ್ ತಿಳಿಸಿದ್ದಾರೆ.