ವಿದ್ಯಾರ್ಥಿಗಳು ಸಮಾಜದ ಸಂಪತ್ತಾಗಿ ರೂಪುಗೊಳ್ಳಬೇಕು: ಜಿಲ್ಲಾಧಿಕಾರಿ ಡಾ.ಜಗದೀಶ್

Update: 2017-05-16 17:52 GMT

ಕೊಣಾಜೆ, ಮೇ 16: ಮೌಲ್ಯಯುತ ಜೀವನ, ಸಾಮಾಜಿಕ ಬದ್ಧತೆ, ಜ್ಞಾನ ವರ್ಧಿಸುವ ಕೇಂದ್ರಗಳಾಗಿ ವಿಶ್ವವಿದ್ಯಾಲಯಗಳು ಕೆಲಸ ಮಾಡಬೇಕಿದೆ. ಅಲ್ಲಿ ವಿದ್ಯಾರ್ಜನೆಗೈದ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಮಾಜದ ಸಂಪತ್ತಾಗಿ ರೂಪುಗೊಂಡರೆ ವಿಶ್ವವಿದ್ಯಾಲಯದ ಘನತೆಯೊಂದಿಗೆ ಮೌಲ್ಯವನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಲ್ಲಿ ಪ್ರಸ್ತುತ ಸಮಾಜದಲ್ಲಿರುವ ಸವಾಲುಗಳನ್ನು ಎದುರಿಸುವ ಮನೋಭಾವನೆಯನ್ನು ಬೆಳೆಸುವಂತಹ ಪಠ್ಯಕ್ರಮಗಳನ್ನು ಅಳವಡಿಸಿಕೊಳ್ಳುವುದೊಂದಿಗೆ ಮುನ್ನಡೆಯಬೇಕಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಅವರು ಅಭಿಪ್ರಾಯಪಟ್ಟರು.

 ಅವರು ಮಂಗಳೂರು ವಿಶ್ವವಿದ್ಯಾಲಯದ ಮಂಗಳಗಂಗೋತ್ರಿ ಕ್ಯಾಂಪಸ್‌ನಲ್ಲಿ ‘ಓಪನ್ ಹೌಸ್’ ಕ್ಯಾಂಪಸ್ ನೋಡ ಬನ್ನಿ ಕಾರ್ಯಕ್ರಮವನ್ನು ಮಂಗಳವಾರ ಎಂಬಿಎ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುವುದಕ್ಕಾಗಿ ವಿದ್ಯಾರ್ಜನೆಯ ಸಮಯದಲ್ಲಿಯೇ ಉತ್ತಮ ಗುರಿಯನ್ನು ಇಟ್ಟುಕೊಂಡು ಆತ್ಮ ಸ್ಥೈರ್ಯ, ಪರಿಶ್ರಮದೊಂದಿಗೆ ಮುನ್ನಡೆಯಬೇಕು ಅಲ್ಲದೆ ಪ್ರಮುಖವಾಗಿ ಮಾನವೀಯತೆಯ ಭಾವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
 
ಓಪನ್ ಹೌಸ್‌ನಂತಹ ಕಾರ್ಯಕ್ರಮಗಳು ವಿಶ್ವವಿದ್ಯಾಲಯದ ಸಂಪರ್ಕ ವಿಲ್ಲದ ಜನರೂ ಕೂಡಾ ಇಲ್ಲಿಗೆ ಬಂದು ವಿಶ್ವವಿದ್ಯಾಲಯದ ಮೂಲಭೂತ ಸೌಲಭ್ಯಗಳ ಹಾಗೂ ಅವಕಾಶಗಳ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಅವರು, ವಿಶ್ವವಿದ್ಯಾಲಯದ ಎಂದರೆ ಜ್ಞಾನದೇಗುಲವಾಗಿದ್ದು ಈ ದೇಗುಲದಲ್ಲಿ ಯಾವುದೆಲ್ಲಾ ಕೋರ್ಸ್‌ಗಳು, ಸೌಲಭ್ಯಗಳು, ವ್ಯವಸ್ಥೆಗಳು ಇವೆ ಎಂಬುದನ್ನು ಅರಿತುಕೊಳ್ಳುವ ದೃಷ್ಟಿಯಿಂದ ಕಳೆದ ಮೂರು ವರ್ಷದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈಗಾಗಲೇ ವಿಶ್ವವಿದ್ಯಾಲಯದ ಅತ್ಯುತ್ತಮ ಲ್ಯಾಬರೋಟರಿಗಳು, ವೈಫೈ ಸೌಲಭ್ಯಗಳು ಸೇರಿದಂತೆ ಹಲವಾರು ಆಧುನಿಕ ವ್ಯವಸ್ಥೆಗಳನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕ್ಯಾಂಪಸ್‌ನಲ್ಲಿ ವಿಸ್ತರಿಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಕುಲಸಚಿವ ಪ್ರೊ.ಕೆ.ಎಂ.ಲೋಕೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕರಾದ ಪ್ರೊ.ಟಿ.ಎನ್.ಶ್ರೀಧರ ಅವರು ವಂದಿಸಿದರು. ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಅವರು ಕಾರ್ಯಕ್ರಮ ನಿರೂಪಿಸಿದರು. ಸಭಾಕಾರ್ಯಕ್ರಮದ ಬಳಿಕ ಜಿಲ್ಲಾಧಿಕಾರಿಯವರು ವಿವಿಧ ವಿಭಾಗಗಳಿಗೆ ಭೇಟಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News