×
Ad

ಅಂತಿಮ ಅಧಿಸೂಚನೆಗೆ ಆಗ್ರಹಿಸಿ ಪಶುವೈದ್ಯಕೀಯ ಪರೀಕ್ಷಕರಿಂದ ಮುಷ್ಕರ

Update: 2017-05-16 23:46 IST

ಉಡುಪಿ, ಮೇ 16: ವೃಂದ ಮತ್ತು ನೇಮಕಾತಿ ನಿಯಮಗಳ ಅಂತಿಮ ಅಧಿಸೂಚನೆಗೆ ಆಗ್ರಹಿಸಿ ಪಶುವೈದ್ಯಕೀಯ ಪರೀಕ್ಷಕರು ಮಂಗಳವಾರ ಉಡುಪಿ ಜಿಲ್ಲೆಯಾದ್ಯಂತ ಅನಿಧಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದು, ಈ ಪ್ರಯುಕ್ತ ಬೈಲೂರಿನಲ್ಲಿರುವ ಉಡುಪಿ ಜಿಲ್ಲಾ ಪಶುಸಂಗೋಪನೆ ಇಲಾಖೆಯ ಉಪ ನಿರ್ದೇಶಕರ ಕಚೇರಿ ಎದುರು ಕರ್ನಾಟಕ ರಾಜ್ಯ ಪಶುವೈದ್ಯಕೀಯ ಪರೀಕ್ಷಕರು ಗಳ ಸಂಘ ಉಡುಪಿ ಜಿಲ್ಲೆ ಇದರ ನೇತೃತ್ವದಲ್ಲಿ ಧರಣಿ ನಡೆಸಿದರು.

ಈ ಮುಷ್ಕರದಲ್ಲಿ ಜಿಲ್ಲೆಯ ಒಟ್ಟು 300ಕ್ಕೂ ಅಧಿಕ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದು, ಜಿಲ್ಲೆಯಲ್ಲಿರುವ 10 ಪಶು ವೈದ್ಯಕೀಯ ಆಸ್ಪತ್ರೆಗಳು, 39 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು, ಮೂರು ಸಂಚಾರಿ ಪಶು ಚಿಕಿತ್ಸಾಲಯ ಮತ್ತು ಒಂದು ಪಾಲಿ ಕ್ಲಿನಿಕ್‌ನ ಸೇವೆಗಳನ್ನು ಇಂದಿನಿಂದ ಸ್ಥಗಿತಗೊಳಿಸ ಲಾಗಿದೆ. ಮಾನವೀಯತೆಯ ದೃಷ್ಠಿಯಿಂದ ತುರ್ತು ಸಂದರ್ಭದಲ್ಲಿ ಮಾತ್ರ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಸುಬ್ರಾಯ ಗಾಣಿಗ ತಿಳಿಸಿದ್ದಾರೆ.

ಇದೇ ಬೇಡಿಕೆ ಮುಂದಿಟ್ಟು ಎ.7ರಿಂದ ನಡೆದ ಕಾಲು ಬಾಯಿ ಜ್ವರ ನಿರೋಧಕ ಲಸಿಕಾ ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧರಿಸಲಾಗಿತ್ತು. ಆದರೆ ಸಚಿವರ ಭರವಸೆಯ ಹಿನ್ನೆಲೆಯಲ್ಲಿ ಅದನ್ನು ಕೈಬಿಡಲಾಗಿತ್ತು. ಆದರೆ ಈವರೆಗೂ ಅಂತಿಮ ಅಧಿಸೂಚನೆ ಹೊರಡಿಸಿಲ್ಲ. ಇದರಿಂದ ಪಶು ವೈದ್ಯಾಧಿಕಾರಿ, ಪಶು ವೈದ್ಯಕೀಯ ಪರೀಕ್ಷಕರು ಹಾಗೂ ಪಶು ವೈದ್ಯಕೀಯ ಸಹಾಯಕರಿಗೆ ತೀರಾ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ಮುಷ್ಕರವನ್ನು ಹಮ್ಮಿಕೊಳ್ಳ ಲಾಗಿದೆ ಎಂದು ಅವರು ಹೇಳಿದರು.

ಆದುದರಿಂದ ಸರಕಾರ ಕೂಡಲೇ ವೃಂದ ಮತ್ತು ನೇಮಕಾತಿಗಳಿಗೆ ಅಂತಿಮ ಅಧಿಸೂಚನೆ ಜಾರಿ ಮಾಡಿ ಕಳೆದ ಎಂಟು ವರ್ಷಗಳಿಂದ ಯಾವುದೇ ಪದೋ ನ್ನತಿಗಳಿಲ್ಲದೆ ಮತ್ತು ಹಣಕಾಸು ಸೌಲಭ್ಯಗಳಿಲ್ಲದೆ ಕಾರ್ಯನಿರ್ವಹಿಸುತ್ತಿರುವ ನಮಗೆ ನ್ಯಾಯ ದೊರಕಿಸಬೇಕು. ಇಲ್ಲದಿದ್ದರೆ ನಾಳೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಮುಷ್ಕರ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರ ಹೆಬ್ಬಾರ್, ಪದಾಧಿಕಾರಿಗಳಾದ ಸತೀಶ್, ವಸಂತ ಮಾರಡ್, ಶಿವಪುತ್ರಯ, ರಾಜ್ಯ ಸರಕಾರಿ ನೌಕರರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News