ಅಫಘಾನಿಸ್ತಾನ್: ಸರಕಾರಿ ಟಿವಿ ಸ್ಟೇಶನ್‌ಗೆ ದಾಳಿ,ನಾಲ್ವರ ಸಾವು
ಜಲಾಲಾಬಾದ್,ಮೇ 17: ಇಲ್ಲಿಯ ಸರಕಾರಿ ಟಿವಿ ಸ್ಟೇಶನ್‌ಗೆ ಗುರುವಾರ ಆತ್ಮಹತ್ಯಾ ಬಾಂಬರ್‌ಗಳು ನುಗ್ಗಿದ್ದು,ತೀವ್ರ ಗುಂಡಿನ ಕಾಳಗ ಮತ್ತು ಸ್ಫೋಟಗಳಿಗೆ ನಗರವು ಸಾಕ್ಷಿಯಾಗಿದೆ. ಹಲವಾರು ಪತ್ರಕರ್ತರು ಕಟ್ಟಡದೊಳಕ್ಕೆ ಸಿಕ್ಕಿಹಾಕಿಕೊಂಡಿದ್ದು.ಗುಡಿನ ಕಾಳಗ ಮುಂದುವರಿದಿದೆ.
ಕನಿಷ್ಠ ನಾಲ್ವರು ಈ ದಾಳಿಯಲ್ಲಿ ಮೃತಪಟ್ಟಿದ್ದು, ಈ ಪೈಕಿ ಇಬ್ಬರು ನಾಗರಿಕರು ಸೇರಿದ್ದಾರೆ. ಈ ದಾಳಿಯು ಅಫಘಾನಿಸ್ತಾನದಲ್ಲಿ ಪತ್ರಕರ್ತರಿಗೆ ಅಪಾಯ ಹೆಚ್ಚುತ್ತಿರುವುದನ್ನು ಸೂಚಿಸುತ್ತಿದೆ.
ಜಲಾಲಾಬಾದ್ ನಂಗ್ರಹಾರ ಪ್ರಾಂತದ ರಾಜಧಾನಿಯಾಗಿದೆ. ಈ ಪ್ರದೇಶವು ಇಸ್ಲಾಮಿಕ್ ಸ್ಟೇಟ್ ಜಿಹಾದಿಗಳ ಭದ್ರನೆಲೆಯಾಗಿದ್ದು, ಇದೇ ಪ್ರದೇಶದಲ್ಲಿ ಕಳೆದ ತಿಂಗಳು ಅಮೆರಿಕದ ಸೇನೆಯು ಇತಿಹಾಸದಲ್ಲಿಯೇ ಅತ್ಯಂತ ಬೃಹತ್ ಬಾಂಬ್‌ನ್ನು ಬಳಸಿ ದಾಳಿಯನ್ನು ನಡೆಸಿತ್ತು.
ನಾಲ್ವರು ದಾಳಿಕೋರರು ಇಂದು ಬೆಳಿಗ್ಗೆ ರೇಡಿಯೊ ಟೆಲಿವಿಜನ್ ಅಫಘಾನಿಸ್ತಾನ್ (ಆರ್‌ಟಿಎ)ನ ಕಟ್ಟಡವನ್ನು ಪ್ರವೇಶಿಸಿದ್ದರು. ಅವರ ಪೈಕಿ ಇಬ್ಬರು ತಮ್ಮನ್ನು ತಾವೇ ಸ್ಫೋಟಿಸಿಕೊಂಡಿದ್ದಾರೆ ಮತ್ತು ಇತರ ಇಬ್ಬರು ಭದ್ರತಾ ಪಡೆಗಳೊಂದಿಗೆ ಇನ್ನೂ ಗುಂಡಿನ ಕಾಳಗ ನಡೆಸುತ್ತಿದ್ದಾರೆ ಎಂದು ಸರಕಾರಿ ವಕ್ತಾರ ಅತಾವುಲ್ಲಾ ಖೋಗ್ಯಾನಿ ಸುದ್ದಿಸಂಸ್ಥೆಗೆ ತಿಳಿಸಿದರು.
ಈವರೆಗೆ ಇಬ್ಬರು ನಾಗರಿಕರು ಸೇರಿದಂತೆ ಕನಿಷ್ಠ ನಾಲ್ವರು ಕೊಲ್ಲಲ್ಪಟ್ಟಿದ್ದು, ಇತರ 14 ಜನರು ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಿಸಲಾಗಿರುವ ಹೆಚ್ಚಿನವರು ಗುಂಡೇಟಿನಿಂದ ಗಾಯಗೊಂಡಿದ್ದಾರೆ.
ಗುಂಡಿನ ಕಾಳಗ ಆರಂಭವಾದ ತಕ್ಷಣ ತಾನು ಸ್ಥಳದಿಂದ ಕಾಲ್ಕಿತ್ತಿದ್ದೆ, ಆದರೆ ತನ್ನ ಹಲವಾರು ಸಹೋದ್ಯೋಗಿಗಳು ಕಟ್ಟಡದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಆರ್‌ಟಿಎದ ಛಾಯಾ ಚಿತ್ರಗ್ರಾಹಕನೋರ್ವ ತಿಳಿಸಿದ.
ಐಸಿಸ್ ಉಗ್ರರು ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ ಎಂದು ದೃಢಪಡದ ವರದಿಗಳು ತಿಳಿಸಿವೆ.