ನಾಳೆ ಕುಲಭೂಷಣ್ ಜಾಧವ್ ಗಲ್ಲು ತಡೆ ಪ್ರಕರಣದ ತೀರ್ಪು
ಹೇಗ್,ಮೇ 17: ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯವು ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಬೇಹುಗಾರಿಕೆ ಆರೋಪದಲ್ಲಿ ಮರಣ ದಂಡನೆಯನ್ನು ವಿಧಿಸಿರುವುದನ್ನು ಪ್ರಶ್ನಿಸಿ ಭಾರತವು ಸಲ್ಲಿಸಿರುವ ಅರ್ಜಿ ಕುರಿತಂತೆ ತನ್ನ ತೀರ್ಪನ್ನು ಇಲ್ಲಿಯ ಅಂತರರಾಷ್ಟ್ರೀಯ ನ್ಯಾಯಾಲಯವು ಗುರುವಾರ ಪ್ರಕಟಿಸಲಿದೆ. ನ್ಯಾಯಾಲಯವು ಸೋಮವಾರ ಉಭಯ ರಾಷ್ಟ್ರಗಳ ವಾದಗಳನ್ನು ಆಲಿಸಿತ್ತು.
ಜಾಧವ್‌ಗೆ ಭಾರತದಿಂದ ಕಾನೂನು ಮತ್ತು ಇತರ ನೆರವುಗಳಿಗೆ ಅವಕಾಶವನ್ನು ನಿರಾಕರಿಸುವ ಮೂಲಕ ಪಾಕಿಸ್ತಾನವು ದೂತಾವಾಸ ಸಂಬಂಧಗಳ ಕುರಿತ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಭಾರತವು ಹೇಳಿದೆ.
ಈ ಪ್ರಕರಣದಲ್ಲಿ ತನ್ನ ಅಧಿಕಾರ ವ್ಯಾಪ್ತಿಯನ್ನು ನ್ಯಾಯಾಲಯವು ನಿರಾಕರಿಸಬೇಕು ಎಂದು ಪಾಕಿಸ್ತಾನವು ಪ್ರತಿಪಾದಿಸಿದೆ.
ಈ ಪ್ರಕರಣವು ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಜಾಧವ್‌ರನ್ನು 2016,ಮಾರ್ಚ್‌ನಲ್ಲಿ ಅಶಾಂತ ಬಲೂಚಿಸ್ತಾನ್ ಪ್ರಾಂತದಲ್ಲಿ ಬಂಧಿಸಲಾಗಿತ್ತು ಎಂದು ಪಾಕಿಸ್ತಾನವು ಹೇಳಿಕೊಂಡಿದೆ. ಬಲೂಚಿಸ್ತಾನ್‌ದಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳು ಮತ್ತು ಉಗ್ರಗಾಮಿ ಪ್ರತ್ಯೇಕತಾ ಚಳವಳಿಯ ನಡುವೆ ಸುದೀರ್ಘ ಸಮಯದಿಂದಲೂ ಸಂಘರ್ಷ ನಡೆಯುತ್ತಿದೆ.
ಬಲೂಚಿಸ್ತಾನ್‌ನಲ್ಲಿ ಅಸ್ಥಿರತೆಯನ್ನ ಸೃಷ್ಟಿಸುವ ಮತ್ತು ಪಾಕಿಸ್ತಾನದ ವಿರುದ್ಧ ಯುದ್ಧವನ್ನು ಸಾರುವ ಉದ್ದೇಶದಿಂದ ಬೇಹುಗಾರಿಕೆ ಮತ್ತು ವಿಧ್ವಂಸಕ ಚಟುವಟಿಕೆಗಳನ್ನು ನಡೆಸುವ ಕಾರ್ಯಭಾರವನ್ನು ಭಾರತದ ಗುಪ್ತಚರ ಸಂಸ್ಥೆ ‘ರಾ’ ತನಗೆ ಒಪ್ಪಿಸಿತ್ತು ಎಂದು ಜಾಧವ್ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪಾಕ್ ಸರಕಾರವು ಆರೋಪಿಸಿದೆ. ಈ ಎಲ್ಲ ಆರೋಪಗಳನ್ನು ಭಾರತವು ನಿರಾಕರಿಸಿದೆ. ಐಸಿಜೆಯಲ್ಲಿ ಭಾರತದ ಪ್ರತಿನಿಧಿಯಾಗಿರುವ ದೀಪಕ್ ಮಿತ್ತಲ್ ಅವರು, ಜಾಧವ್ ವಿರುದ್ಧದ ಆರೋಪಗಳು ‘ಕಪೋಲಕಲ್ಪಿತ ’ ವಾಗಿವೆ ಮತ್ತು ಪಾಕ್ ಸೇನಾ ನ್ಯಾಯಾಲಯದಿಂದ ಅವರ ರಹಸ್ಯ ವಿಚಾರಣೆಯು ಒಂದು ‘ಪ್ರಹಸನ ’ವಾಗಿದೆ ಎಂದು ಬಣ್ಣಿಸಿದ್ದಾರೆ.
ಜಾಧವ್‌ಗೆ ಮರಣ ದಂಡನೆಯನ್ನು ಜಾರಿಗೊಳಿಸಲು ದಿನಾಂಕವನ್ನು ನಿಗದಿಗೊಳಿಸಿಲ್ಲ ಮತ್ತು ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ಪಾಕಿಸ್ತಾನವು ಹೇಳಿತ್ತು. ಭಾರತದ ದೂರು ‘ರಾಜಕೀಯ ನಾಟಕ ’ವಾಗಿದೆ ಮತ್ತು ನ್ಯಾಯಾಲಯವು ಈ ಪ್ರಕರಣದಲ್ಲಿ ತನ್ನ ಅಧಿಕಾರ ವ್ಯಾಪ್ತಿಯನ್ನು ನಿರಾಕರಿಸಬೇಕು ಎಂದು ಪಾಕ್ ಪ್ರತಿನಿಧಿ ಮುಹಮ್ಮದ್ ಫೈಸಲ್ ಹೇಳಿದ್ದರು.
ವಿಯೆನ್ನಾ ನಿರ್ಣಯದಡಿ ದೂತಾವಾಸ ಸಂಪರ್ಕ ಅವಕಾಶ ಬದ್ಧ ಹಕ್ಕು ಅಲ್ಲ ಮತ್ತು ಹೇಗಿದ್ದರೂ ಭಾರತ ಹಾಗೂ ಪಾಕ್ ನಡುವಿನ 2008ರ ದ್ವಿಪಕ್ಷೀಯ ಒಪ್ಪಂದದಿಂದಾಗಿ ಈ ನಿರ್ಣಯ ಅಸ್ತಿತ್ವವನ್ನು ಕಳೆದುಕೊಂಡಿದೆ ಎಂದು ಪಾಕಿಸ್ತಾನವು ವಾದಿಸಿತ್ತು.
ಐಸಿಜೆ ದೇಶಗಳ ನಡುವಿನ ವಿವಾದಗಳನ್ನು ಬಗೆಹರಿಸಲು ವಿಶ್ವಸಂಸ್ಥೆಯ ನ್ಯಾಯಾ ಲಯವಾಗಿದ್ದು, ಅದರ ನಿರ್ಧಾರಗಳು ಅಂತಿಮ ಮತ್ತು ಬಂಧನಕಾರಿಯಾಗಿರುತ್ತವೆ. ಆದರೆ ತನ್ನ ತೀರ್ಪುಗಳನ್ನು ಜಾರಿಗೊಳಿಸಲು ಯಾವುದೇ ಮಾರ್ಗವನ್ನು ಅದು ಹೊಂದಿಲ್ಲ ಮತ್ತು ಅದರ ತೀರ್ಪುಗಳು ಆಗಾಗ್ಗೆ ಕಡೆಗಣಿಸಲ್ಪಡುತ್ತಲೇ ಬಂದಿವೆ.