ಆ್ಯಕ್ಸಿಸ್ ಬ್ಯಾಂಕ್‌ಗೆ ವಂಚನೆ: ಆರೋಪಿಗಳಿಗೆ ಪೊಲೀಸ್ ಕಸ್ಟಡಿ
ಮಂಗಳೂರು, ಮೇ 17: ನಗರದ ಎಯ್ಯಡಿಯ ಆ್ಯಕ್ಸಿಸ್ ಬ್ಯಾಂಕ್‌ಗೆ ವಂಚಿಸಿದ ಎಸ್‌ಐಎಸ್ ಪ್ರೊಸೆಗ್ಯುರ್ ಹೋಲ್ಡಿಂಗ್ ಕಂಪೆನಿಯ ಬೊಲೆರೋ ವಾಹನ ಚಾಲಕ ಚಿತ್ರದುರ್ಗದ ಕರಿಬಸಪ್ಪ (24), ಗನ್‌ಮ್ಯಾನ್ ಕೊಡಗಿನ ಪೂವಪ್ಪ (38), ಹಣ ವಂಚಿಸಲು ಮಾರ್ಗದರ್ಶನ ನೀಡಿದ್ದ ಕೊಡಗಿನ ಕಾರಿಯಪ್ಪ ಯಾನೆ ಕಾಶಿ (46) ಎಂಬವರನ್ನು ಜೆಎಂಎಫ್‌ಸಿ ಮೂರನೆ ನ್ಯಾಯಾಲಯ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಮೇ 11ರಂದು ಬೆಳಗ್ಗೆ 8:30ಕ್ಕೆ 7.5 ಕೋ.ರೂ.ವನ್ನು ಎಸ್‌ಐಎಸ್ ಪ್ರೊಸೆಗ್ಯುರ್ ಹೋಲ್ಡಿಂಗ್ ಕಂಪೆನಿಗೆ ಸೇರಿದ ಬೊಲೆರೋ ವಾಹನದಲ್ಲಿ ಆರೋಪಿಗಳು ಬೆಂಗಳೂರಿಗೆ ಸಾಗಾಟ ಮಾಡುತ್ತಿದ್ದರು. ಆದರೆ ಸಕಾಲದಲ್ಲಿ ಹಣ ತಲುಪಿಸದೆ ಆರೋಪಿಗಳು ವಂಚಿಸಿದ್ದರು. ಇದನ್ನರಿತ ಕಂಪೆನಿಯ ಸಚಿನ್ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮಂಗಳವಾರ ಮೂವರನ್ನು ಬಂಧಿಸಿ ಸೋಮವಾರಪೇಟೆಯಿಂದ 20 ಕಿ.ಮೀ.ದೂರದಲ್ಲಿರುವ ಕುಂಬಾರುಗಡಿಗೆ ಎಂಬಲ್ಲಿನ ಕಾಡಿನಲ್ಲಿ ಬಚ್ಚಿಟ್ಟ 6.30 ಕೋ.ರೂ. ವಶಪಡಿಸಿಕೊಂಡಿದ್ದರು.
ಬುಧವಾರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಒಪ್ಪಿಸುವಂತೆ ಮನವಿ ಮಾಡಿಕೊಂಡ ಮೇರೆಗೆ ನ್ಯಾಯಾಲಯ ಮೂವರು ಆರೋಪಿಗಳನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.