×
Ad

ಟ್ರಂಪ್ ಸೌದಿ ಭೇಟಿ : ಅಮೆರಿಕ ಅಧ್ಯಕ್ಷನಾದ ಬಳಿಕ ಕೈಗೊಳ್ಳಲಿರುವ ಚೊಚ್ಚಲ ವಿದೇಶ ಯಾತ್ರೆ

Update: 2017-05-17 20:20 IST

►ಇಸ್ರೇಲ್, ಫೆಲೆಸ್ತೀನ್ ನಾಯಕರ ಜೊತೆಗೂ ಮಾತುಕತೆ

ವಾಶಿಂಗ್ಟನ್, ಮೇ 17: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಾರಾಂತ್ಯದಲ್ಲಿ ಸೌದಿ ಆರೇಬಿಯಕ್ಕೆ ಭೇಟಿ ನೀಡಲಿದ್ದಾರೆ. ಅಮೆರಿಕದ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಕೈಗೊಳ್ಳಲಿರುವ ಚೊಚ್ಚಲ ವಿದೇಶ ಯಾತ್ರೆ ಇದಾಗಿದೆ. ತನ್ನ ಸೌದಿ ಭೇಟಿಯ ಸಂದರ್ಭದಲ್ಲಿ ಟ್ರಂಪ್ ಅವರು ತೀವ್ರವಾದದ ವಿರುದ್ಧ ಬಲವಾದ ಹೋರಾಟ ನಡೆಸುವ ಅವಶ್ಯಕತೆಯ ಬಗ್ಗೆ ಇಸ್ಲಾಮಿಕ್ ರಾಷ್ಟ್ರಗಳ ನಾಯಕರ ಜೊತೆ ಚರ್ಚಿಸಲಿದ್ದಾರೆ.

‘‘ ಸೌದಿ ಪ್ರವಾಸದಲ್ಲಿ ಟ್ರಂಪ್ ಅವರು 50ಕ್ಕೂ ಅಧಿಕ ಮುಸ್ಲಿಂ ರಾಷ್ಟ್ರಗಳ ನಾಯಕರ ಜೊತೆ ಭೋಜನಕೂಟದಲ್ಲಿ ಪಾಲ್ಗೊಳ್ಳಲಿದ್ದು, ಅಲ್ಲಿ ಅವರು ಮೂಲಭೂತವಾದ ಸಿದ್ದಾಂತದ ವಿರುದ್ಧ ಹೋರಾಡುವ ಅಗತ್ಯದ ಬಗ್ಗೆ ಭಾಷಣ ಮಾಡಲಿರುವರು. ಇಸ್ಲಾಮ್ ಧರ್ಮದ ಶಾಂತಿಯುತ ಸಿದ್ಧಾಂತವು ಜಗತ್ತಿನಾದ್ಯಂತ ಪ್ರಭಾವ ಬೀರಲಿದೆಯೆಂಬ ರಾಷ್ಟ್ರಾಧ್ಯಕ್ಷರು ಆಶಾವಾದವನ್ನು ಹೊಂದಿದ್ದಾರೆ.

 ‘‘ ಈ ಭಾಷಣವು ಎಲ್ಲಾ ನಾಗರಿಕತೆಗಳ ಸಮಾನ ಶತ್ರುಗಳ ವಿರುದ್ಧ ವಿಶಾಲವಾದ ಮುಸ್ಲಿಂ ಜಗತ್ತನ್ನು ಒಗ್ಗೂಡಿಸಲಿದೆ ಹಾಗೂ ನಮ್ಮ ಮುಸ್ಲಿಂ ಭಾಗಿದಾರರಿಗೆ ಅಮೆರಿಕ ಹೊಂದಿರುವ ಬದ್ಧತೆಯನ್ನು ಪ್ರದರ್ಶಿಸಲಿದೆ’’ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಚ್.ಆರ್.ಮ್ಯಾಕ್‌ಸ್ಟರ್ ಸೋಮವಾರ ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಾರಾಂತ್ಯದಲ್ಲಿ ರಿಯಾದ್‌ಗೆ ಆಗಮಿಸಲಿರುವ ಟ್ರಂಪ್ ಅವರನ್ನು ಸೌದಿ ದೊರೆ ಸಲ್ಮಾನ್ ಸ್ವಾಗತಿಸಲಿದ್ದಾರೆ. ಅಮೆರಿಕ ಅಧ್ಯಕ್ಷರು ತನ್ನ ಸೌದಿ ಪ್ರವಾಸ ಸಂದರ್ಭದಲ್ಲಿ ಅಮೆರಿಕ-ಸೌದಿ ಭದ್ರತಾ ಹಾಗೂ ಆರ್ಥಿಕ ಸಹಕಾರ ಒಪ್ಪಂದವನ್ನು ಇನ್ನಷ್ಟು ಬಲಪಡಿಸುವ ಹಲವಾರು ಒಪ್ಪಂದಗಳಿಗೆ ಸಹಿಹಾಕಲಿದ್ದಾರೆಂದು ಮ್ಯಾಕ್‌ಸ್ಟರ್ ಮಾಹಿತಿ ನೀಡಿದ್ದಾರೆ. ಟ್ರಂಪ್ ಅವರು ಗಲ್ಫ್ ರಾಷ್ಟ್ರಗಳ ನಾಯಕರ ಜೊತೆ ಮಾತುಕತೆ ನಡೆಸಲಿರುವ ಜೊತೆಗೆ, ಗಲ್ಫ್ ಸಹಕಾರ ಮಂಡಳಿಯ ಮುಖಂಡರ ಜೊತೆಗೂ ಚರ್ಚಿಸಲಿರುವರು. ಈ ಸಂದರ್ಭದಲ್ಲಿ ಟ್ರಂಪ್ ಅವರು ತೀವ್ರವಾದದ ವಿರುದ್ಧ ಹೋರಾಡುವ ಹಾಗೂ ಆಧುನೀಕತೆಗೆ ಉತ್ತೇಜನ ನೀಡುವ ನೂತನ ಕೇಂದ್ರವೊಂದನ್ನು ಉದ್ಘಾಟಿಸಲಿರುವರು.

‘‘ಈ ಕೇಂದ್ರದ ಸ್ಥಾಪನೆಯ ಮೂಲಕ ನಮ್ಮ ಸೌದಿ ಆರೇಬಿಯ ಸೇರಿದಂತೆ ನಮ್ಮ ಮುಸ್ಲಿಂ ಮಿತ್ರರು ತೀವ್ರವಾದದ ವಿರುದ್ಧ ಹಾಗೂ ತಮ್ಮ ಕ್ರಿಮಿನಲ್ ಹಾಗೂ ರಾಜಕೀಯ ಕಾರ್ಯಸೂಚಿಯನ್ನು ಮುನ್ನಡೆಸಲು ಧರ್ಮವನ್ನು ತಪ್ಪಾಗಿ ವ್ಯಾಖ್ಯಾನಿಸುತ್ತಿರುವವರ ವಿರುದ್ಧ ದೃಢವಾದ ನಿಲುವನ್ನು ತಳೆಯಲಿದ್ದಾರೆಂದು ಮ್ಯಾಕ್‌ಸ್ಟರ್ ಹೇಳಿದರು.

ಸೌದಿ ಆರೇಬಿಯ ಪ್ರವಾಸದ ಬಳಿಕ ಟ್ರಂಪ್ ಜೆರುಸಲೇಂಗೆ ಪ್ರಯಾಣಿಸಲಿದ್ದು, ಅಲ್ಲಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರನ್ನು ಭೇಟಿಯಾಗಲಿದ್ದಾರೆ. ಮಾರನೆ ದಿನ ಅವರು ಬೆತ್ಲೆಹೆಮ್‌ಗೆ ತೆರಳಿ ಫೆಲೆಸ್ತೀನ್ ಅಧ್ಯಕ್ಷ ಮಹಮ್ಮೂದ್ ಅಬ್ಬಾಸ್ ಜೊತೆ ಮಾತುಕತೆ ನಡೆಸಲಿದ್ದು, ಪ್ರದೇಶದಲ್ಲಿ ಸಂಘರ್ಷವನ್ನು ಕೊನೆಗೊಳಿಸುವುದಕ್ಕೆ ಅವೆುರಿಕಕ್ಕಿರುವ ಆಸಕ್ತಿಯನ್ನು ವ್ಯಕ್ತಪಡಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News