ದಲಿತ ಸಹೋದರರಿಗೆ ಹಲ್ಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಬಂಟ್ವಾಳ, ಮೇ 17: ಗಾಂಜಾ ಸೇದಲು ಒತ್ತಾಯಿಸಿದಾಗ ನಿರಾಕರಿಸಿದ ಬುದ್ಧಿಮಾಂದ್ಯ ಸಹಿತ ಇಬ್ಬರು ದಲಿತ ಸಹೋದರರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ
ತುಂಬೆ ಗ್ರಾಮದ ಕೆಳಗಿನ ತುಂಬೆ ನಿವಾಸಿಗಳಾದ ಶ್ರವಣ್, ಅವಿನಾಶ್, ಮಾರಿಪಳ್ಳ ಕುಮುಡೇಲು ನಿವಾಸಿಗಳಾದ ರೋಷನ್, ಚರಣ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು 20ರಿಂದ 22 ವರ್ಷ ಪ್ರಾಯದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ
ತಾಲೂಕಿನ ಪುದು ಗ್ರಾಮದ ಮಾರಿಪಳ್ಳ ಸಮೀಪದ ಕುಮುಡೇಲು ನಿವಾಸಿ ಸುಜಾತಾ ಎಂಬವರ ಮಕ್ಕಳಾದ ಸಮಂತ್(16) ಮತ್ತು ಸುಶಾಂತ್(14) ಮಂಗಳವಾರ ಮಧ್ಯಾಹ್ನ ಕುಮುಡೇಲು ಸರಕಾರಿ ಶಾಲೆಯ ಆವರಣದೊಳಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿ ಗಾಂಜಾ ಸೇದುತ್ತಿದ್ದ ಆರೋಪಿಗಳು ಬಾಲಕರನ್ನು ಹತ್ತಿರ ಕರೆದು ಗಾಂಜಾ ಸೇದುವಂತೆ ಒತ್ತಾಯಿಸಿದ್ದಾರೆ. ಈ ಸಂದರ್ಭ ಗಾಂಜಾ ಸೇದಲು ನಿರಾಕರಿಸಿದ ಬಾಲಕರಿಗೆ ತಂಡ ಹಲ್ಲೆ ನಡೆಸಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು.
ಬಂಟ್ವಾಳ ಗ್ರಾಮಾಂತರ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.