ಶ್ರೀಕೃಷ್ಣನ ಸಂದೇಶ ಕಲಿಯುಗಕ್ಕೆ ದಾರಿದೀಪ: ಪುತ್ತಿಗೆ ಶ್ರೀ
ಉಡುಪಿ, ಮೇ 17: ಶ್ರೀಕೃಷ್ಣ ದೇವರ ಸಂದೇಶವು ಕಲಿಯುಗದ ಜನರಿಗೆ ದಾರಿ ದೀಪವಾಗಿದೆ. ಭಗವಂತನನ್ನು ಮೂರ್ತಿಯಲ್ಲಿ ಕಾಣುವುದಕ್ಕಿಂತ ಹೃದಯ ದಲ್ಲಿ ನೆಲೆಗೊಳಿಸಿ, ಅಂತರಾಳದಲ್ಲಿ ಪ್ರತಿಷ್ಠಾಪಿಸಬೇಕು. ಕೃಷ್ಣನ ಆದರ್ಶ ಇಲ್ಲದೇ ಜೀವನದಲ್ಲಿ ಏನನ್ನು ಸಾಧಿಸಲಾಗದು, ಭಗವಂತನನ್ನು ಒಲಿಸಿಕೊಳ್ಳುವ ಕಾರ್ಯ ನಿರಂತರ ನಡೆಯಬೇಕು ಎಂದು ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠದ ಸಹಸ್ರ ರಜತ ಕಲಶ ಸಹಿತ ಬ್ರಹ್ಮಕಲಶೋತ್ಸವದ ಅಂಗವಾಗಿ ರಾಜಾಂಗಣದಲ್ಲಿ ಬುಧವಾರ ನಡೆದ ಧರ್ಮಸಭೆಯ ಅಧ್ಯಕ್ಷತೆ ವಹಿಸಿ ಅವರು ಆಶೀರ್ವಚನ ನೀಡಿದರು.
ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ನಮ್ಮ ವ್ಯಕ್ತಿತ್ವದಲ್ಲಿರುವ ವಿಕೃತಿಯನ್ನು ತ್ಯಜಿಸಿ ಸಂಸ್ಕೃತಿ ಯನ್ನು ಮೈಗೂಡಿಸಿಕೊಳ್ಳಬೇಕು. ದೇವರ ಅನುಗ್ರಹದಿಂದ ಮಾತ್ರ ಸಜ್ಜನರಾಗಿ ಬದುಕು ನಡೆಸಬಹುದು ಎಂದು ಹೇಳಿದರು.
ರಾಜ್ಯ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಗೋಪಾಲ ಪೂಜಾರಿ, ಪ್ರಯಾಗ ಮಠದ ಶ್ರೀವಿದ್ಯಾತ್ಮ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಕೆ.ಪಿ.ಪುತ್ತೂರಾಯ ವಿಶೇಷ ಉಪನ್ಯಾಸ ನೀಡಿದರು. ಬದ್ರಿನಾಥ್ ಆಚಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.