×
Ad

ಮಕ್ಕಳ ಪ್ರತಿಭೆ ಅನಾವರಣಕ್ಕೆ ಶಿಬಿರಗಳು ಸಹಕಾರಿ: ಭವಾನಿ ಚಿದಾನಂದ

Update: 2017-05-17 23:07 IST

ಪುತ್ತೂರು, ಮೇ 17: ಮಕ್ಕಳಲ್ಲಿ ಹಲವು ರೀತಿಯ ಪ್ರತಿಭೆಗಳು ಅಡಕವಾಗಿದ್ದು, ಈ ಪ್ರತಿಭೆಗಳ ಅನಾವರಣಗೊಳಿಸಲು ಬೇಸಿಗೆ ಶಿಬಿರಗಳು ಸಹಕಾರಿಯಾಗಿದೆ ಎಂದು ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಅವರು ತಿಳಿಸಿದರು.

ಅವರು ಕರ್ನಾಟಕ ಬಾಲವಿಕಾಸ ಅಕಾಡಮಿ ಧಾರಾವಾಡ, ಜಿ.ಪಂ ಮಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಸಂಸಾರ ಪುತ್ತೂರು ಕಲಾ ತಂಡದ ಸಹಯೋಗದಲ್ಲಿ ಪುತ್ತೂರಿನ ಶ್ರೀ ರಾಮಕೃಷ್ಣ ಆಶ್ರಮದ ವಠಾರದಲ್ಲಿ ಮೇ 8ರಿಂದ 17ರ ತನಕ ನಡೆದ 10 ದಿನಗಳ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಬಿರದಲ್ಲಿ ಹತ್ತು ತಾಯಿಯ ಮಕ್ಕಳು ಒಂದೇ ತಾಯಿಯ ಮಕ್ಕಳಂತೆ ಸೇರಿಕೊಂಡಿರುತ್ತಾರೆ. ಅವರಲ್ಲಿರುವ ಅಂಜಿಕೆ, ಕೀಳರಿಮೆ ದೂರವಾತ್ತದೆ ಎಂದ ಅವರು ಮಕ್ಕಳು ದಾರಿತಪ್ಪದಂತೆ ಎಚ್ಚರ ವಹಿಸುವ ಜವಾಬ್ದಾರಿ ಹೆತ್ತವರ ಮೇಲಿದೆ ಎಂದರು. ಅಸಹಾಯಕರ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ನಯನಾ ರೈ, ಶಿಬಿರದ ವ್ಯವಸ್ಥಾಪಕರಾದ ಸಂಸಾರ ತಂಡದ ಸಂಚಾಲಕ ಸಂಶುದ್ದೀನ್ ಸಂಪ್ಯ ಮತ್ತು ಶಿಬಿರದ ನಿರ್ದೇಶಕ ಮೌನೇಶ್ ವಿಶ್ವಕರ್ಮ ಮಾತನಾಡಿದರು.

ಮಕ್ಕಳ ಹೆತ್ತವರಾದ ಸವಿತಾ, ಉಮಾ ಅನಿಸಿಕೆ ವ್ಯಕ್ತ ಪಡಿಸಿದರು. ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿ ಮಕ್ಕಳು ನಾಟಕ, ನೃತ್ಯ, ಸಂಗೀತ ಹಾಡಿನ ಮೂಲಕ ಶಿಬಿರದಲ್ಲಿ ಕಲಿತ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿದರು. ಶಿಬಿರಾರ್ಥಿ ಪುಟಾಣಿ ಜಾದೂಗಾರ ಮಾ. ರೋಶನ್ ಜಾದೂ ಪ್ರದರ್ಶನ ನೀಡಿದರು.

ಇದೇ ಸಂದರ್ಭದಲ್ಲಿ ಶಿಬಿರದಲ್ಲಿ ಭಾಗವಹಿಸಿದ ಪಟಾಣಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾದ ದಿನೇಶ್ ವಿಶ್ವಕರ್ಮ, ರಾಧೇಶ್, ಚೈತ್ರ, ಅಂಗನವಾಡಿ ಮೇಲ್ವಿಚಾರಕಿ ಹೇಮ ರಾಮದಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಹೆಗಡೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸುಜಾತಾ ವಂದಿಸಿದರು. ಅಂಗನವಾಡಿ ಮೇಲ್ವಿಚಾರಕಿ ಜಲಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News