ರಾಜ್ಯದಲ್ಲಿ 1,92,319 ಕ್ಯೂಬಿಕ್ ಮೀಟರ್ ಅಕ್ರಮ ಮರಳು ಸಾಗಾಟ-ಸಂಜೀವ ಮಟಂದೂರು ಆರೋಪ
ಮಂಗಳೂರು, ಮೇ 17: 2013ರಿಂದ 2017ರವರೆಗೆ ರಾಜ್ಯದಲ್ಲಿ 1,92,319 ಕ್ಯೂಬಿಕ್ ಮೀಟರ್ ಅಕ್ರಮವಾಗಿ ಮರಳು ಸಾಗಾಟವಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಟಂದೂರು ಸುದ್ದಿಗೋಷ್ಠಿಯಲ್ಲಿಂದು ಆರೋಪಿಸಿದ್ದಾರೆ.
ಈ ಅಕ್ರಮ ಮರಳು ಸಾಗಾಟದಲ್ಲಿ ‘ಪ್ರಭಾವಿ ’ರಾಜಕಾರಣಿಗಳ ಕೈವಾಡವಿದೆ ಎಂದು ಸಂಜೀವ ಮಟಂದೂರು ಆರೋಪಿಸಿದ್ದಾರೆ. ರಾಜ್ಯದಲ್ಲಿ 4ವರ್ಷ ಪೂರ್ಣಗೊಳಿಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ರೈತರ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿದೆ. ಪರಿಣಾಮವಾಗಿ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ 2,573 ಮಂದಿ ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. 91,269 ಕೋಟಿ ರೂ. ಸಾಲ ಮಾಡಿರುವುದು ರಾಜ್ಯ ಸರಕಾರದ ಸಾಧನೆಯಾಗಿದೆ. ಕೇಂದ್ರ ಸರಕಾರದಿಂದ ಜಿಲ್ಲೆಗೆ ವಿವಿಧ ಯೋಜನೆಗಳ ಮೂಲಕ 10 ಸಾವಿರಕ್ಕಿಂತಲೂ ಅಧಿಕ ಅನುದಾನ ಸಂಸದರ ಪ್ರಯತ್ನದಿಂದ ಬಿಡುಗಡೆಯಾಗಿದೆ. ಆದರೆ ರಾಜ್ಯ ಸರಕಾರವನ್ನು ಪ್ರತಿನಿಧಿಸುವ ಹಲವು ಸಚಿವರು ಜಿಲ್ಲೆಯಿಂದ ನೇಮಕಗೊಂಡು ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಗೆ ಎಷ್ಟು ಅನುದಾನ ತಂದಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಲಿ ಎಂದು ಸಂಜೀವ ಮಟಂದೂರು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಮೇ18ರಂದು ಕೇಂದ್ರ ಸರಕಾರದ ವಿವಿಧ ಯೋಜನೆಗಳ ಮಾಹಿತಿ ನೀಡುವ ಸಮಾವೇಶ ಅಡ್ಯಾರ್‌ನಲ್ಲಿ ನಡೆಯಲಿದೆ ಎಂದು ಸಂಜೀವ ಮಟಂದೂರು ಈ ಸಂದರ್ಭ ತಿಳಿಸಿದರು.
ಸುದ್ದಿಗೊಷ್ಠಿಯಲ್ಲಿ ಬಿಜೆಪಿ ಪದಾಧಿಕಾರಿಗಳಾದ ಬೃಜೇಶ್ ಚೌಟ, ಸುದರ್ಶನ್, ಕಿಶೋರ್ ರೈ ಮೊದಲಾದವರು ಉಪಸ್ಥಿತರಿದ್ದರು.