ನಾಳೆಯಿಂದ ಕದ್ರಿ ಪಾರ್ಕ್‌ನಲ್ಲಿ ಮಾವು- ಹಲಸಿನ ಮೇಳ

Update: 2017-05-17 18:40 GMT

ಮಂಗಳೂರು, ಮೇ 17: ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮದ ಆಶ್ರಯದಲ್ಲಿ ಕದ್ರಿ ಉದ್ಯಾನವನದಲ್ಲಿ ಮೇ 19ರಿಂದ 25ರವರೆಗೆ ಮಾವು ಹಾಗೂ ಹಲಸಿನ ಮೇಳವನ್ನು ಆಯೋಜಿಸಲಾಗಿದೆ. ಕದ್ರಿ ಪಾರ್ಕ್‌ನಲ್ಲಿ ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ದ.ಕ. ಜಿಪಂ ಸಿಇಒ ಡಾ.ಎಂ.ಆರ್.ರವಿ, ಮೇಳದಲ್ಲಿ ವಿವಿಧ ತಳಿಗಳ ಮಾವು ಹಾಗೂ ಹಲಸಿನ ಹಣ್ಣುಗಳನ್ನು ಜಿಲ್ಲೆಯ ಜನರು ಹಾಗೂ ರೈತರಿಗೆ ಪರಿಚಯಿಸುವ ಜತೆಗೆ ಗ್ರಾಹಕರಿಗೆ ನೇರವಾಗಿ ಖರೀದಿಗೂ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು. ಪ್ರದರ್ಶನದಲ್ಲಿ ಉತ್ತಮ ಮಾವು ಹಾಗೂ ಹಲಸು ಲಭ್ಯವಾಗಲಿದ್ದು, ಗ್ರಾಹಕರಿಗೆ ಕಾರ್ಬೈಡ್ ಮುಕ್ತ, ನೈಸರ್ಗಿಕ ವಾಗಿ ಮಾಗಿಸಿದ ಮಾವಿನ ಹಣ್ಣುಗಳು ದೊರೆಯಲಿವೆೆ ಎಂದರು. ಮೇ 19ರಂದು ಮಧ್ಯಾಹ್ನ 3ಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮೇಳ ಉದ್ಘಾಟಿಸಲಿದ್ದು, ಶಾಸಕ ಜೆ.ಆರ್.ಲೋಬೊ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರದರ್ಶನ ಪ್ರತಿದಿನ ಬೆಳಗ್ಗೆ 9ರಿಂದ ರಾತ್ರಿ 8:30ರವರೆಗೆ ತೆರೆದಿರುತ್ತದೆ ಎಂದರು. 

  • ಸ್ಥಳೀಯ ಕಾಡು ಮಾವು- ಹಲಸು ಉಳಿಸಲು ಪ್ರಯತ್ನ

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಡಾ.ಎಂ.ಆರ್.ರವಿ. ತೋಟಗಾರಿಕಾ ಇಲಾಖೆಯ ಮೂಲಕ ಸ್ಥಳೀಯ ರೈತರು ಬೆಳೆಸಿ, ಉಳಿಸಿಕೊಂಡು ಬಂದಿರುವ ಸ್ಥಳೀಯ ಕಾಡು ಮಾವು ಹಾಗೂ ಹಲಸಿನ ಮರಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು. ಅಲ್ಲದೆ, ಈ ಬಗ್ಗೆ ಸಮೀಕ್ಷೆಯೊಂದನ್ನು ನಡೆಸುವಂತೆ ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಗೋಷ್ಠಿಯಲ್ಲಿ ಹಿರಿಯ ಸಹಾಯಕ ತೋಟಕಾರಿಗಾ ನಿರ್ದೇಶಕ ಸೀಮಾ ಬಿ.ಎ., ಉಪ ನಿರ್ದೇಶಕ ಯೋಗೇಶ್ ಎಚ್.ಆರ್. ಮೊದಲಾದವರು ಉಪಸ್ಥಿತರಿದ್ದರು.

ವಿವಿಧ ತಳಿಯ ಹಲಸು- ಮಾವು ಲಭ್ಯ

ಪ್ರದರ್ಶನದಲ್ಲಿ ಅಲ್ಫೋನ್ಸ್, ಬಾದಾಮಿ, ಮಲ್ಲಿಕಾ, ರಸಪೂರಿ, ಸಿಂಧೂರಾ, ಕೇಸರ್, ಮಲ್‌ಗೋವಾ, ನೀಲಂ ಜತೆಗೆ ಸ್ಥಳೀಯ ತಳಿಗಳಾದ ಸಕ್ಕರೆಗುತ್ತಿ, ಗುಂದಾ, ಅಪ್ಪೆಮಿಡಿ, ಜವಾರಿ ಮೊದಲಾದ ತಳಿಯ ಮಾವಿನ ಹಣ್ಣುಗಳು ಲಭ್ಯವಿರುತ್ತವೆ.

ಚಂದ್ರ ಹಲಸು, ಸ್ವರ್ಣ, ಬೈರಸಂದ್ರ, ತೂಗುಗೆರೆ, ಸಕ್ಕರೆಪಟ್ಟಣ ಹಲಸು, ರುದ್ರಾಕ್ಷಿ ಮೊದಲಾದ ಹಲಸಿನ ತಳಿಗಳು ಪ್ರದರ್ಶನದಲ್ಲಿರುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News