×
Ad

ಎಂಐಒಗೆ ಗೌರವಾಧ್ಯಕ್ಷರಾಗಿ ಅನಂತಕೃಷ್ಣ ನೇಮಕ

Update: 2017-05-18 00:17 IST

 ಮಂಗಳೂರು, ಮೇ 17: ನಗರದ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಅಂಕಾಲಜಿ(ಎಂಐಒ) ಸಂಸ್ಥೆಯ ನೂತನ ಗೌರವಾಧ್ಯಕ್ಷರಾಗಿ ಕರ್ನಾಟಕ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಅನಂತ ಕೃಷ್ಣ ನೇಮಕಗೊಂಡಿದ್ದಾರೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಸುರೇಶ್ ರಾವ್ ಸುದ್ದಿಗೊಷ್ಠಿಯಲ್ಲಿಂದು ತಿಳಿಸಿದ್ದಾರೆ.

ರಾಜ್ಯ ಸರಕಾರದ ನೆರವಿನೊಂದಿಗೆ ಅತ್ಯಂತ ಹೆಚ್ಚು ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಿದ ಎರಡನೆ ಸಂಸ್ಥೆ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಅಂಕಾಲಜಿಯಾಗಿದೆ. ಪ್ರಥಮ ಸ್ಥಾನದಲ್ಲಿ ಕಿದ್ವಾಯಿ ಆಸ್ಪತ್ರೆ ಇದೆ ಎಂದವರು ತಿಳಿಸಿದರು.

ಕಳೆದ 5 ವರ್ಷಗಳಲ್ಲಿ ಸಂಸ್ಥೆಯ ವತಿಯಿಂದ 18 ಸಾವಿರ ಕ್ಯಾನ್ಸರ್ ರೋಗಿಗಳ ತಪಾಸಣೆ ನಡೆಸಲಾಗಿದೆ. ಈ ಪೈಕಿ ಗುರುತಿಸಲಾದ 10 ಸಾವಿರ ಕ್ಯಾನ್ಸರ್ ರೋಗಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಸಂಸ್ಥೆಯಲ್ಲಿ ಕ್ಯಾನ್ಸರ್ ಖಚಿತ ಪತ್ತೆಗೆ ಪೆಟ್‌ಸಿಟಿ ಅಳವಡಿಸಿ 3,000 ಜನರಲ್ಲಿ ಕ್ಯಾನ್ಸರ್ ಪತ್ತೆ ಹಚ್ಚಲಾಗಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ಎಂಐಒ ಆಸ್ಪತ್ರೆಯಲ್ಲಿ ಸ್ಟಿರಿಯೋಟಿಕ್ ರೇಡಿಯೊ ಸರ್ಜರಿ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಸಂಸ್ಥೆ ಕ್ಯಾನ್ಸರ್ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸುತ್ತಿದೆ. ಸಮಾಜದ ದುರ್ಬಲ ವರ್ಗದವರಿಗೆ ರಿಯಾಯಿತಿ ಚಿಕಿತ್ಸೆ, ಮಕ್ಕಳಿಗೆ ಉಚಿತ ವಿಕಿರಣ ಚಿಕಿತ್ಸೆಯನ್ನು ಸಂಸ್ಥೆಯ ವತಿಯಿಂದ ನೀಡಲಾಗಿದೆ ಎಂದು ಸುರೇಶ್ ರಾವ್ ತಿಳಿಸಿದ್ದಾರೆ.

*ಕರಾವಳಿಯಲ್ಲಿ ಅನ್ನನಾಳದ ಕ್ಯಾನ್ಸರ್ ಅಧಿಕ: ನಗರ ಪ್ರದೇಶದಲ್ಲಿ ಸ್ತನ ಹಾಗೂ ಕರುಳಿನ ಕ್ಯಾನ್ಸರ್ ಅಧಿಕ ಪ್ರಮಾಣದಲ್ಲಿ ಕಂಡು ಬಂದರೆ, ಮಂಗಳೂರಿನಲ್ಲಿ ಹೆಚ್ಚಾಗಿ ಅನ್ನನಾಳದ ಮತ್ತು ಕೆಲವರಲ್ಲಿ ಬಾಯಿಯ ಕ್ಯಾನ್ಸರ್ ಕಂಡುಬಂದಿದೆ. ಮಾಂಸ ಹಾರಿಗಳಲ್ಲಿ ಈ ಪ್ರಮಾಣ ಅಧಿಕವಾಗಿದೆ ಎನ್ನುವುದು ತಮ್ಮ ಗಮನಕ್ಕೆ ಬಂದಿದೆ ಎಂದು ಸುರೇಶ್ ರಾವ್ ತಿಳಿಸಿದ್ದಾರೆ.

ಸಾಮಾನ್ಯವಾಗಿ ಆಹಾರ, ಜೀವನ ಕ್ರಮ ಕ್ಯಾನ್ಸರ್ ರೋಗಕ್ಕೆ ಪ್ರಮುಖ ಕಾರಣ ಎಂದು ಸುರೇಶ್ ರಾವ್ ತಿಳಿಸಿದರು. ಸಂಸ್ಥೆ 5ನೆ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಮೇ 20ರಂದು ಸಂಜೆ 6ಕ್ಕೆ ‘ಕ್ಯಾನ್ಸರ್ ರೋಗಿಗಳ ನೆನಪಿನಲ್ಲಿ ಒಂದು ಸಂಜೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಸಚಿವರು, ಗಣ್ಯರು ಭಾಗವಹಿಸಲಿದ್ದಾರೆ ಎಂದು ಸುರೇಶ್ ರಾವ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಡಾ.ಅನಂತಕೃಷ್ಣ, ಡಾ.ಜಲಾಲುದ್ದೀನ್ ಅಕ್ಬರ್, ಡಾ.ಸನತ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News