ಝಾಕಿರ್ ನಾಯ್ಕ್ ರ ಶಾಲೆಗೆ ಇನ್ನು ಇವರ ಮಾಲಕತ್ವ

Update: 2017-05-18 08:48 GMT

ಹೊಸದಿಲ್ಲಿ,ಮೇ 18 : ಇಸ್ಲಾಮಿಕ್ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ರ ನಿಷೇಧಿತ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ನಡೆಸುವ ಇಸ್ಲಾಮಿಕ್ ಇಂಟರ್ ನ್ಯಾಷನಲ್ ಸ್ಕೂಲ್ ಇದರ ಮಾಲಕತ್ವವನ್ನು ಸಮಾಜವಾದಿ ಪಕ್ಷದ ಶಾಸಕ ಅಬು ಆಸಿಂ ಆಜ್ಮಿ ವಹಿಸಿದ್ದಾರೆ.

ಝಾಕಿರ್ ಸುತ್ತ ಹರಡಿಕೊಂಡಿರುವ ವಿವಾದದಿಂದಾಗಿ ಈ ಶಾಲೆಯಲ್ಲಿ ಕಲಿಯುತ್ತಿರುವ ಸುಮಾರು 200 ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿತ್ತಲ್ಲದೆ ಶಾಲೆ ಮುಚ್ಚುಗಡೆ ಭೀತಿಯನ್ನೂ ಎದುರಿಸುತ್ತಿತ್ತು. ಶಾಲೆಯಲ್ಲಿ ನರ್ಸರಿಯಿಂದ 10ನೇ ತರಗತಿ ತನಕ ಕಲಿಸಲಾಗುತ್ತದೆ.

ಇನ್ನು ಮುಂದೆ ಆಜ್ಮಿಯವರ ನಿಯಾಝ್ ಮೈನಾರಿಟಿ ಎಜುಕೇಶನ್ ಎಂಡ್ ವೆಲ್ಫೇರ್ ಟ್ರಸ್ಟ್ ಈ ಶಾಲೆಯನ್ನು ನಡೆಸಲಿದ್ದು ಅದನ್ನು ಅವಿಸೆನ್ನ ಇಂಟರ್ ನ್ಯಾಷನಲ್ ಸ್ಕೂಲ್ ಎಂದು ಮರುನಾಮಕರಣ ಮಾಡಲಿದೆ.

ಮುಂಬೈಯ ಮಂಖುರ್ಡ್ ಶಿವಾಜಿ ನಗರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಆಜ್ಮಿ ತಮ್ಮ ತಂದೆಯ ಹೆಸರಿನಲ್ಲಿ ಈ ವೆಲ್ಫೇರ್ ಟ್ರಸ್ಟ್ ಆರಂಭಿಸಿದ್ದರು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಐಆರ್‌ಎಫ್ ನಡೆಸುತ್ತಿರುವ ಶಾಲೆಯನ್ನು ಮುಚ್ಚದಂತೆ ಅವರು ಕಳೆದ ವರ್ಷ ಮಹಾರಾಷ್ಟ್ರ ಸರಕಾರವನ್ನು ಒತ್ತಾಯಿಸಿದ್ದರು. ಆಡಳಿತಮಂಡಳಿ ಬದಲಾವಣೆಯಾಗಿರುವ ಹೊರತಾಗಿಯೂ ಶಾಲೆಯಲ್ಲಿ ಹಿಂದಿನ ಉದ್ಯೋಗಿಗಳ ಸೇವೆ ಹಾಗೂ ಪಠ್ಯಕ್ರಮವನ್ನೇ ಮುಂದುವರಿಸಿಕೊಂಡು ಹೋಗಲಾಗುವುದು ಎಂದು ಆಜ್ಮಿ ಹೇಳಿದ್ದಾರೆ.

ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಳೆದ ನವೆಂಬರ್ ತಿಂಗಳಲ್ಲಿ ಕೇಂದ್ರ ಗೃಹ ಸಚಿವಾಲಯವು ಐಆರ್‌ಎಫ್ ಮೇಲೆ ನಿಷೇಧ ಹೇರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News