×
Ad

ಅಂತಿಮ ತೀರ್ಪಿಗೆ ಮುನ್ನ ಜಾಧವ್‌ರನ್ನು ಗಲ್ಲಿಗೇರಿಸುವಂತಿಲ್ಲ: ಪಾಕಿಸ್ತಾನಕ್ಕೆ ಐಸಿಜೆ ತಾಕೀತು

Update: 2017-05-18 18:59 IST

 ಹೊಸದಿಲ್ಲಿ,ಮೇ 18: ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ತಾನಿ ಸೇನಾ ನ್ಯಾಯಾಲಯವು ವಿಧಿಸಿರುವ ಮರಣ ದಂಡನೆಗೆ ಗುರುವಾರ ತಡೆಯಾಜ್ಞೆ ನೀಡಿರುವ ವಿಶ್ವಸಂಸ್ಥೆಯ ನ್ಯಾಯಾಲಯವಾಗಿರುವ ಹೇಗ್‌ನ ಅಂತರರಾಷ್ಟ್ರೀಯ ನ್ಯಾಯಾಲಯ(ಐಸಿಜೆ)ವು, ಈ ಪ್ರಕರಣದಲ್ಲಿ ಅಂತಿಮ ತೀರ್ಪು ಹೊರಬೀಳುವವರೆಗೂ ಅವರನ್ನು ಗಲ್ಲಿಗೇರಿಸಲಾ ಗುವುದಿಲ್ಲ ಎನ್ನುವುದನ್ನು ಖಚಿತಪಡಿಸುವಂತೆ ಪಾಕಿಸ್ತಾನಕ್ಕೆ ತಾಕೀತು ಮಾಡಿದೆ. ಐಸಿಜೆಯ ಈ ಆದೇಶ ಭಾರತಕ್ಕೆ ಭಾರೀ ಗೆಲುವು ನೀಡಿದ್ದರೆ, ಪಾಕಿಸ್ತಾನಕ್ಕೆ ತೀವ್ರ ಮುಜುಗರ ವನ್ನುಂಟು ಮಾಡಿದೆ.

ಈ ಪ್ರಕರಣದಲ್ಲಿ ಅಂತಿಮ ತೀರ್ಪು ಬಾಕಿ ಉಳಿದಿದ್ದು, ಜಾಧವ್‌ಗೆ ಮರಣ ದಂಡನೆ ಜಾರಿಯಾಗದಂತೆ ತನಗೆ ಲಭ್ಯವಿರುವ ಎಲ್ಲ ಕ್ರಮಗಳನ್ನು ಪಾಕಿಸ್ತಾನವು ಕೈಗೊಳ್ಳಬೇಕು ಎಂದು ನ್ಯಾಯಾಲಯದ ಸರ್ವಾನುಮತದ ನಿರ್ಧಾರವನ್ನು ಓದಿದ ಮುಖ್ಯ ನ್ಯಾಯಾಧೀಶ ರಾನಿ ಅಬ್ರಹಾಂ ತಿಳಿಸಿದರು.

ವಿಯೆನ್ನಾ ಒಪ್ಪಂದದಂತೆ ಜಾಧವ್‌ಗೆ ರಾಜತಾಂತ್ರಿಕ ಸಂಪರ್ಕಕ್ಕೆ ಅವಕಾಶವನ್ನು ನೀಡಬೇಕಾಗಿತ್ತು ಎಂದೂ ಐಸಿಜೆ ತಿಳಿಸಿತು.

ಜಾಧವ್‌ಗೆ ಮರಣ ದಂಡನೆ ಜಾರಿಯನ್ನು ಅಮಾನತುಗೊಳಿಸಲು ಪಾಕ್ ಸರಕಾರಕ್ಕೆ ಆದೇಶಿಸುವಂತೆ ಸೋಮವಾರ ನಡೆದಿದ್ದ ತುರ್ತು ವಿಚಾರಣೆ ವೇಳೆ ಭಾರತವು ಐಸಿಜೆಯನ್ನು ಆಗ್ರಹಿಸಿತ್ತು.

ಜಾಧವ್‌ರನ್ನು 2016 ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು. ಭಾರತದ ಗುಪ್ತಚರ ಸಂಸ್ಥೆ ‘ರಾ’ಗಾಗಿ ತಾನು ಬೇಹುಗಾರಿಕೆ ಮತ್ತು ವಿಧ್ವಂಸಕ ಕೃತ್ಯಗಳಿಗೆ ಸಂಚು ನಡೆಸುತ್ತಿದ್ದುದಾಗಿ ಜಾಧವ್ ತಪ್ಪೊಪ್ಪಿಗೆ ಹೇಳಿಕೆಯನ್ನು ನೀಡಿದ್ದಾರೆ ಎಂದು ಪಾಕಿಸ್ತಾನಿ ಅಧಿಕಾರಿಗಳು ಪ್ರತಿಪಾದಿಸಿದ್ದರು. ಪಾಕಿಸ್ತಾನಿ ಸೇನಾ ನ್ಯಾಯಾಲಯವು ಕಳೆದ ತಿಂಗಳು ಜಾಧವ್‌ಗೆ ಮರಣ ದಂಡನೆಯನ್ನು ವಿಧಿಸಿತ್ತು.

ಐಸಿಜೆ ತನ್ನ ಮೇಲ್ಮನವಿಯನ್ನು ಇತ್ಯರ್ಥಗೊಳಿಸುವ ಮೊದಲೇ ಪಾಕಿಸ್ತಾನವು ಜಾಧವ್‌ರನ್ನು ಗಲ್ಲಿಗೇರಿಸಬಹುದು ಎಂಬ ಆತಂಕವನ್ನು ಭಾರತವು ವ್ಯಕ್ತಪಡಿಸಿತ್ತು. ಜಾಧವ್‌ಗೆ ರಾಜತಾಂತ್ರಿಕ ಸಂಪರ್ಕಕ್ಕೆ ಅವಕಾಶ ಮತ್ತು ಕಾನೂನು ನೆರವನ್ನು ನಿರಾಕರಿಸುವ ಮೂಲಕ ಪಾಕಿಸ್ತಾನವು ವಿಯೆನ್ನಾ ನಿರ್ಣಯವನ್ನು ಉಲ್ಲಂಘಿಸಿದೆ ಹಾಗೂ ಅವರ ವಿರುದ್ಧದ ಆರೋಪಗಳು ಅಥವಾ ಸಾಕ್ಷಾಧಾರಗಳನ್ನು ಬಹಿರಂಗಗೊಳಿಸಲು ನಿರಾಕರಿಸುತ್ತಿದೆ ಎಂದು ವಿಚಾರಣೆ ಸಂದರ್ಭ ಭಾರತ ಸರಕಾರವು ಆರೋಪಿಸಿತ್ತು.

ಪಾಕಿಸ್ತಾನವು ವಿಯೆನ್ನಾ ನಿರ್ಣಯವನ್ನು ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನನ್ನು ಉಲ್ಲಂಘಿಸಿದೆಯೇ ಎನ್ನುವುದನ್ನು ವಿಶ್ವಸಂಸ್ಥೆ ನ್ಯಾಯಾಲಯವು ನಿರ್ಧರಿಸ ಬೇಕೆಂದು ಭಾರತವು ಬಯಸಿದೆ.

ಅಮಾಯಕ ಭಾರತೀಯ ಪ್ರಜೆಯಾಗಿರುವ ಜಾಧವ್‌ರನ್ನು ಕಪೋಲಕಲ್ಪಿತ ಆರೋಪಗಳ ಮೇಲೆ ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಪಾಕಿಸ್ತಾನದ ಜೈಲಿನಲ್ಲಿ ರಿಸಲಾಗಿದೆ. ಅವರಿಗೆ ಯಾವುದೇ ಸಂಪರ್ಕವಿಲ್ಲದಂತೆ ಮಾಡಲಾಗಿದೆ ಮತ್ತು ಯಾವುದೇ ಸಮಯದಲ್ಲಿ ಅವರನ್ನು ಗಲ್ಲಿಗೇರಿಸುವ ಅಪಾಯವಿದೆ ಎಂದು ಭಾರತವು ಐಸಿಜೆಯಲ್ಲಿ ನಿವೇದಿಸಿಕೊಂಡಿತ್ತು.

ಮರಣ ದಂಡನೆಯನ್ನು ಶೀಘ್ರವೇ ಜಾರಿಗೊಳಿಸಲಾಗುತ್ತಿತ್ತು ಎನ್ನುವುದನ್ನು ನಿರಾಕರಿ ಸಿದ ಪಾಕಿಸ್ತಾನವು, ಕಾನೂನು ಪರಿಹಾರ ಕಂಡುಕೊಳ್ಳಲು ಜಾಧವ್‌ಗೆ ಕನಿಷ್ಠ ಆಗಸ್ಟ್‌ವರೆಗೆ ಕಾಲಾವಕಾಶವಿತ್ತು ಎಂದು ಹೇಳಿತ್ತು.

 ಹಿಂದಿನ ಬಾರಿ 1999ರಲ್ಲಿ ಭಾರತ ಮತ್ತು ಪಾಕಿಸ್ತಾನ ಐಸಿಜೆ ಕಟ್ಟೆಯನ್ನು ಹತ್ತಿದ್ದವು. ತನ್ನ ನೌಕಾಪಡೆಯ ವಿಮಾನವೊಂದನ್ನು ಭಾರತವು ಗುಂಡು ಹಾರಿಸಿ ಪತನಗೊಳಿಸಿದ್ದನ್ನು ಪಾಕಿಸ್ತಾನವು ಆಗ ಪ್ರತಿಭಟಿಸಿತ್ತು. ಆ ಘಟನೆಯಲ್ಲಿ 16 ಜನರು ಸಾವನ್ನಪ್ಪಿದ್ದರು. ಈ ವಿವಾದಲ್ಲಿ ಯಾವುದೇ ಪಾತ್ರ ವಹಿಸುವ ಅಧಿಕಾರ ವ್ಯಾಪ್ತಿ ತನಗಿಲ್ಲ ಎಂದು ನಿರ್ಧರಿಸಿದ್ದ ಐಸಿಜೆ, ಪ್ರಕರಣವನ್ನು ಅಲ್ಲಿಗೇ ಮುಕ್ತಾಯಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News