ಮಾತೃಭಾಷಾ ಪ್ರೇಮದಿಂದ ದೇಶದ ಅಭಿವೃದ್ಧಿ: ಸಚಿವ ಮೇಘ್ವಾಲ್

Update: 2017-05-18 14:25 GMT

ಪುತ್ತೂರು, ಮೇ 18: ಯಾವ ದೇಶದಲ್ಲಿ ವಿವೇಕಾನಂದರ ಆದರ್ಶ ಹಾಗೂ ಮಾತೃ ಭಾಷಾ ಶಿಕ್ಷಣದ ಪ್ರೇಮ ಇದೆಯೋ ಅಂತಹ  ದೇಶ ಅಭಿವೃದ್ಧಿಯಾಗುತ್ತದೆ ಎಂದು ಕೇಂದ್ರ ಸರ್ಕಾರದ ಹಣಕಾಸು ರಾಜ್ಯ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು ಹೇಳಿದರು.

ಪುತ್ತೂರಿನ ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬೆಳ್ಳಿಹಬ್ಬದ ಹಿನ್ನಲೆಯಲ್ಲಿ ಸುಮಾರು 3 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ‘ಶೇಷಾದ್ರಿ’ ಶಾಲಾ ಕಟ್ಟಡವನ್ನು ಗುರುವಾರ ಸಂಜೆ ಅವರು ಲೋಕಾರ್ಪಣೆಗೈದು, ಶಾಲೆಯ ಬೆಳ್ಳಿಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು. 
       
 ಸ್ವಾಮಿ ವಿವೇಕಾನಂದರು ಈ ದೇಶದ ಶಕ್ತಿ. ಪಾಶ್ಚಿಮಾತ್ಯರಲ್ಲಿ ದರ್ಜಿ ಒಬ್ಬನು ವ್ಯಕ್ತಿತ್ವ ರೂಪಿಸಿದರೆ ಭಾರತದಲ್ಲಿ ಚಾರಿತ್ರ್ಯ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಹೇಳಿದವರು. ಸ್ವಾತಂತ್ರ ಪೂರ್ವದಲ್ಲೇ ಭಾರತದ ಭವಿಷ್ಯವನ್ನು ಕಂಡವರು. ನಮ್ಮ ಕಾಲದಲ್ಲಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ 2020ರ ಕನಸನ್ನು ಹರಿಯಬಿಟ್ಟವರು. ಅವರೆಲ್ಲರ ಕನಸು ನನಸಾಗುವ ದಿನಗಳು ಹತ್ತಿರದಲ್ಲಿವೆ. ಮಾತೃ ಭಾಷಾ ಶಿಕ್ಷಣದ ವೈಭವ ಇರುವಲ್ಲಿ ದೇಶ ಮುನ್ನಡೆಯುವುದರಲ್ಲಿ ಅನುಮಾನವಿಲ್ಲ ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುಟುಂಬ ಪ್ರಬೋಧನಾ ವಿಭಾಗದ ಅಖಿಲ ಭಾರತೀಯ ಸಂಯೋಜಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು ಮಾತನಾಡಿ ಯಾವುದೇ ದೇಶ ಅಭ್ಯುದಯ ಆಗಬೇಕಾದರೆ ಹಿಂದೆ ಆ ದೇಶ ಹೇಗಿತ್ತು ಈಗಿನ ಸವಾಲುಗಳೇನು ಮುಂದಿನ ಕನಸೇನು ಎನ್ನುವುದನ್ನು ಗಮನಿಸಬೇಕು. ಭಾರತದಲ್ಲಿ ಹಿಂದೆ ಭಾರತೀಯ ಮಾನಸಿಕತೆ ಇತ್ತು. ಆದರೆ ಈಗ ಇಂಗ್ಲಿಷ್ ಬಗೆಗೆ ಆಸಕ್ತಿ ಹೆಚ್ಚಾಗುತ್ತಿದೆ. ಹಾಗೆಂದು ಆಂಗ್ಲ ಮಾಧ್ಯಮ ಕೆಟ್ಟದ್ದಲ್ಲ, ಆದರೆ ಇಂಗ್ಲಿಷ್ ಮಾನಸಿಕತೆ ಆತಂಕಕಾರಿ. ಇಲ್ಲಿಯ ಸಂಸ್ಕೃತಿ, ಸಂಸ್ಕಾರ ಕೇವಲ ಇಲ್ಲಿನ ಭಾಷೆಯಿಂದ ಮಾತ್ರ ಸಾಧ್ಯ. ಭಾರತೀಯ ಭಾಷೆಗಳ ಸಮಾಧಿಯಲ್ಲಿ ಇಂಗ್ಲಿಷ್ ಕಟ್ಟುವುದು ಒಪ್ಪತಕ್ಕ ವಿಚಾರ ಅಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಪ್ರಸ್ತುತ ನಮ್ಮ ಸಮಾಜ ಕನ್ನಡ ಮಾಧ್ಯಮ ಶಾಲೆಯಿಂದ ದೂರ ಸರಿಯುತ್ತಿದೆ. ಆದರೆ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಕೊಟ್ಟಾಗ ಮಾತ್ರ ಮಗುವಿಗೆ ಉಪಯೋಗ, ಸಹಾಯ ಆಗಲು ಸಾಧ್ಯ ಎಂಬುದು ವಿಜ್ಞಾನಿಗಳು, ಶಿಕ್ಷಣವೇತ್ತರು ಒಪ್ಪಿಕೊಂಡಿರುವ ಸತ್ಯ. ಈ ಹಿನ್ನಲೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಕಳೆದ ಇಪ್ಪತ್ತೈದು ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಎಸ್.ಜಿ ಅವರು ಶಾಲೆಯ ನೂತನ ಗಣಕ ಯಂತ್ರ ಕೊಠಡಿಯನ್ನು ಉದ್ಘಾಟಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ಶಾಲಾ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ, ಬೆಳ್ಳಿ ಹಬ್ಬ ಸಮಿತಿ ಕಾರ್ಯದರ್ಶಿ ಹರಿಣಿ ಪುತ್ತೂರಾಯ ಮತ್ತಿತರರು ಉಪಸ್ಥಿತರಿದ್ದರು.  

ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಅಚ್ಯುತ ನಾಯಕ್ ಅವರು ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ ವಂದಿಸಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕಿಯರಾದ ಉಮಾ ಮೋಹನ್ ಹಾಗೂ ವಿದ್ಯಾ ಅನಿಲ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News