ಅಮೆರಿಕ ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪ : ತನಿಖೆಗೆ ಮಾಜಿ ಎಫ್‌ಬಿಐ ವರಿಷ್ಠ ಮುಯೆಲ್ಲರ್ ನೇತೃತ್ವ

Update: 2017-05-18 15:18 GMT

ವಾಶಿಂಗ್ಟನ್,ಮೇ 18: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪ ನಡೆಸಿದೆಯೆಂಬ ಬಲವಾದ ಆರೋಪಗಳ ಕುರಿತ ನಡೆಯುತ್ತಿರುವ ತನಿಖೆಯ ನೇತೃತ್ವವನ್ನು ಅಮೆರಿಕ ತನಿಖಾ ದಳ ಎಫ್‌ಬಿಐನ ಮಾಜಿ ಮುಖ್ಯಸ್ಥ ರಾಬರ್ಟ್ ಮುಯೆಲ್ಲರ್ ಅವರು ವಹಿಸಿಕೊಳ್ಳಲಿದ್ದಾರೆ.

ಮುಯೆಲ್ಲರ್ ನೇಮಕಕ್ಕೆ ಸಂಬಂಧಿಸಿ ಅಮೆರಿಕದ ನ್ಯಾಯಾಂಗ ಇಲಾಖೆ ಬುಧವಾರ ಅಧಿಸೂಚನೆಯೊಂದನ್ನು ಪ್ರಕಟಿಸಿದೆ. ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಹೊರಗಿನವರೊಬ್ಬರು ತನಿಖೆಯ ನೇತೃತ್ವ ವಹಿಸುವುದು ಉತ್ತಮವೆಂಬ ಕಾರಣಕ್ಕಾಗಿ ಮುಯೆಲ್ಲರ್ ಅವರ ನೇಮಕವಾಗಿದೆಯೆಂದು ಉಪ ಅಟಾರ್ನಿ ಜನರಲ್ ರೋಸ್ ರೊನ್‌ಸ್ಟಿನ್ ತಿಳಿಸಿದ್ದಾರೆ. ಮುಯೆಲ್ಲರ್ ಅವರ ನೇಮಕವನ್ನು ರಿಪಬ್ಲಿಕನ್ ಹಾಗೂ ಡೆಮಾಕ್ರಾಟಿಕ್ ಪಕ್ಷಗಳೆರಡೂ ಅನುಮೋದಿಸಿವೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪ ನಡೆಸಿದೆಯೆಂಬ ಆರೋಪಗಳ ಹಿನ್ನೆಲೆಯಲ್ಲಿ ಉದ್ಭವಿಸಿರುವ ಸನ್ನಿವೇಶವು ಅಮೆರಿಕದ ಇತಿಹಾಸದಲ್ಲಿಯೇ ‘‘ರಾಜಕಾರಣಿಯೊಬ್ಬರ ವಿರುದ್ಧ ನಡೆಯುತ್ತಿರುವ ಅತಿ ದೊಡ್ಡ ನರಬೇಟೆಯಾಗಿದೆ ಅ’’ಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಟಕಿಯಾಡಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ತನ್ನ ಎದುರಾಳಿ ಅಭ್ಯರ್ಥಿ ಹಿಲರಿ ಕ್ಲಿಂಟನ್ ಹಾಗೂ ನಿಕಟಪೂರ್ವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ವಿರುದ್ದ ಆರೋಪಗಳ ಬಗ್ಗೆ ಯಾಕೆ ತನಿಖೆ ನಡೆದಿಲ್ಲವೆಂದು ಅವರು ಪ್ರಶ್ನಿಸಿದ್ದಾರೆ.

‘‘ಕ್ಲಿಂಟನ್ ಅವರ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಹಾಗೂ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಆಡಳಿತದಲ್ಲಿ ನಡೆದ ಆಕ್ರಮಗಳ ಬಗ್ಗೆ ತನಿಖೆ ನಡೆಸಲು ಒಬ್ಬನೇ ಒಬ್ಬ ವಿಶೇಷ ಅಧಿಕಾರಿಯನ್ನು ನೇಮಿಸಲಾಗಿಲ್ಲ ’’ ಎಂದು ಅವರು ಪ್ರಶ್ನಿಸಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪದ ಆರೋಪಗಳ ಕುರಿತ ತನಿಖೆಗೆ ಮುಯೆಲ್ಲರ್ ಅವರ ನೇಮಕವು ಶ್ವೇತಭವನವನ್ನು ಅಚ್ಚರಿಗೊಳಿಸಿದೆ. ಉಪ ಅಟಾರ್ನಿ ಜನರಲ್ ರೋಸ್ ರೊಸೆನ್‌ಸ್ಟೀನ್ ಅವರು ಮುಯೆಲ್ಲರ್ ನೇಮಕಾತಿಯ ಆದೇಶಕ್ಕೆ ಸಹಿ ಹಾಕಿದ ಬಳಿಕವಷ್ಟೇ ಟ್ರಂಪ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿತ್ತು.

ಟ್ರಂಪ್ ಅವರ ಚುನಾವಣಾ ಪ್ರಚಾರ ತಂಡ ಹಾಗೂ ರಶ್ಯ ನಡುವೆ ಸಂಭಾವ್ಯ ನಂಟುಗಳು ಇತ್ತೆಂಬ ಆರೋಪಗಳಿಗೆ ಸಂಬಂಧಿಸಿ ಮುಯೆಲ್ಲರ್ ನೇತೃತ್ವದಲ್ಲಿ ಎಫ್‌ಬಿಐ ಹಾಗೂ ಅಮೆರಿಕ ಕಾಂಗ್ರೆಸ್ ತನಿಖೆ ನಡೆಸಲಿವೆ. ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವು ಟ್ರಂಪ್ ಪರವಾಗಿ ಇರುವಂತೆ ಮಾಡಲು ಮಾಸ್ಕೊ ಸಂಚು ನಡೆಸಿತ್ತೆಂದು ಅಮೆರಿಕದ ಬೇಹುಗಾರಿಕಾ ಸಂಸ್ಥೆಗಳು ಶಂಕಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News