×
Ad

ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ದೇವಾಲಯ ಉದ್ಘಾಟನೆ

Update: 2017-05-18 21:20 IST

ಕುಂದಾಪುರ, ಮೇ 18: ದೇವರು ಮತ್ತು ಮಾನವನ ನಡುವೆ ನಿಕಟ ಸಂಬಂಧವನ್ನು ಬೆಸೆಯುವುದೇ ದೇವಾಲಯ ಎಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ  ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.

 ಗುರುವಾರ ಗಂಗೊಳ್ಳಿಯಲ್ಲಿ ನೂತನವಾಗಿ ನಿರ್ಮಿಸಿದ ಕೊಸೆಸಾಂವ್ ಅಮ್ಮನವರ ದೇವಾಲಯದ ಉದ್ಘಾಟನೆ ಹಾಗೂ ಆಶೀರ್ವಚನ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡುತ್ತಿದ್ದರು.  ಭಾರತೀಯ ಸಂಸ್ಕೃತಿಯಲ್ಲಿ ದೇವಾಲಯಗಳಿಗೆ ಅರ್ಥಪೂರ್ಣವಾದ ಸ್ಥಾನವಿದ್ದು, ದೇವರ ಅಸ್ತಿತ್ವವನ್ನು ತಿಳಿಯಪಡಿಸುವ ಸ್ಥಳವೇ ದೇವಾಲಯ. ಭಕ್ತರು ದೇವಾಲಯದಲ್ಲಿ ದೇವರ ಅಸ್ತಿತ್ವವನ್ನು ಮನಗಂಡು ಶರಣಾಗಿ ತಮ್ಮ ಕೋರಿಕೆ ಹಾಗೂ ಬೇಡಿಕೆಗಳನ್ನು ಸಲ್ಲಿಸುತ್ತಾರೆ. ಕ್ರೈಸ್ತ ಭಕ್ತಾದಿಗಳಿಗೆ ದೇವಾಲಯ ಒಂದು ಆಧ್ಯಾತ್ಮಿಕ ಕೇಂದ್ರ ಎಂದವರು ನುಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಬೈಂದೂರು ಶಾಸಕ ಗೋಪಾಲ ಪೂಜಾರಿ ನೂತನ ಚರ್ಚಿನ ಉದ್ಘಾಟನೆಯ ಪ್ರಯುಕ್ತ ಹೊರತಂದ ಸ್ಮರಣ ಸಂಚಿಕೆಯನ್ನು ಅನಾವರಣಗೊಳಿಸಿ ಮಾತನಾಡಿ, ದೇವಾಲಯದ ನಿರ್ಮಾಣದೊಂದಿಗೆ ಭಕ್ತರ ಇಷ್ಟಾರ್ಥಗಳನ್ನು ನೇರವೇರಿಸಲು ಒಂದು ಅವಕಾಶವಾಗಿದ್ದು, ಇದು ಹೊಸ ಚೈತನ್ಯವನ್ನು ನೀಡುವ ಕೆಲಸವಾಗಿದೆ ಎಂದರು.

ಇನ್ನೋರ್ವ ಮುಖ್ಯ ಅತಿಥಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಮಾತನಾಡಿ ಇಂದಿನ ದಿನಗಳಲ್ಲಿ ನಾವೆಲ್ಲಾ ಒಂದು ಎಂಬ ಪರಂಪರೆಯನ್ನು ಬೆಳೆಸಬೇಕಾದ ಅಗತ್ಯತೆ ಹೆಚ್ಚಿದೆ ಎಂದರು. ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಮಾತನಾಡಿ ದೇಶದಲ್ಲಿ ಕೇವಲ ಶೇ. 2.37 ಇರುವ ಕ್ರೈಸ್ತ ಸಮುದಾಯ ದೇಶದ ಬೆಳವಣಿಗೆಯಲ್ಲಿ ಅದರಲ್ಲೂ ಪ್ರಮುಖವಾಗಿ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸೇವೆಯನ್ನು ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ಚರ್ಚ್ ಕಟ್ಟಡಕ್ಕೆ ಅತೀ ಹೆಚ್ಚು ಧನಸಹಾಯ ನೀಡಿದ ದಾನಿಗಳನ್ನು, ಹಿಂದಿನ ಧರ್ಮಗುರುಗಳನ್ನು, ಕಟ್ಟಡದ ನಿರ್ಮಾಣದಲ್ಲಿ ಸಹಕರಿ ಸಿದ ಇಂಜಿನಿಯರ್, ಕಂಟ್ರಾಕ್ಟರ್ ಹಾಗೂ ಇತರರನ್ನು ಸನ್ಮಾನಿಸಲಾಯಿತು.

ಈ ಸಮಾರಂಭದಲ್ಲಿ ಗುಲ್ಬರ್ಗಾ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ. ಡಾ ರೋಬರ್ಟ್ ಮಿರಾಂದಾ, ಕುಂದಾಪುರ ವಲಯ ಪ್ರಧಾನ ಧರ್ಮಗುರು ವಂ. ಅನಿಲ್ ಡಿಸೋಜಾ, ಉದ್ಯಮಿಗಳಾದ ಎಂ. ಎಂ. ಇಬ್ರಾಹಿಂ, ನರಸಿಂಹ ಪೂಜಾರಿ, ಗಂಗೊಳ್ಳಿ ಗ್ರಾಪಂನ ಸೀತಾರಾಮ ಶೆಟ್ಟಿ, ವಂ. ಅಲ್ಫೋನ್ಸ್ ಡಿಲೀಮಾ, ಸಿಸ್ಟರ್ ಜುಲಿಯಾನ್ ಜೆರಾಲ್ಡ್ ಕ್ರಾಸ್ತಾ, ಪ್ರೀತಿ ಫೆರ್ನಾಂಡಿಸ್ ಮುಂತಾದವರು ಉಪಸ್ಥಿತರಿದ್ದರು.

ಚರ್ಚಿನ ಧರ್ಮಗುರು ವಂ.ಆಲರ್ಟ್ ಕ್ರಾಸ್ತಾ ಸ್ವಾಗತಿಸಿ, ಒವಿನ್ ರೆಬೆಲ್ಲೊ, ಲವಿಟಾ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News