ಉಡುಪಿ: 21ಕ್ಕೆ ಯಕ್ಷ ವೈವಿದ್ಯ, ಬಿಳಿಮಲೆಗೆ ಪ್ರಶಸ್ತಿ ಪ್ರದಾನ
ಉಡುಪಿ, ಮೇ 18: ಯಕ್ಷಗಾನ ಕಲಾರಂಗ ಯಕ್ಷಗಾನ ವಿದ್ವಾಂಸರಿಗೆ ನೀಡುವ ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿಗೆ ಕಲಾವಿಮರ್ಶಕ, ಸಂಘಟಕ, ಅರ್ಥಧಾರಿ, ನಿವೃತ್ತ ಪ್ರಾಧ್ಯಾಪಕ, ಹಿರಿಯ ವಿದ್ವಾಂಸ ಪುರುಷೋತ್ತಮ ಬಿಳಿಮಲೆ ಅವರಿಗೆ ಮೇ 21ರ ರವಿವಾರದಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಪ್ರದಾನ ಮಾಡಲಾಗುವುದು.
ಅಂದು ದಿನವಿಡೀ ನಡೆಯುವ ಕಾರ್ಯಕ್ರಮದಲ್ಲಿ ಬೆಳಗ್ಗೆ 9:30ಕ್ಕೆ ಸುಬ್ರಾಯ ಸಂಪಾಜೆಯವರಿಂದ ವಚನ-ಯಕ್ಷಗಾಯನ ಪ್ರಸ್ತುತಗೊಳ್ಳಲಿದೆ. 10:00ಕ್ಕೆ ಜಾನಪದ ವಿದ್ವಾಂಸ ಕೃಷ್ಣಮೂರ್ತಿ ಹನೂರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಬಾಕರ ಜೋಶಿ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಯಕ್ಷಗಾನ ಕೇಂದ್ರದ ಪ್ರಾಂಶುಪಾಲರಾದ ಗುರು ಬನ್ನಂಜೆ ಸಂಜೀವ ಸುವರ್ಣ ಭಾಗವಹಿಸಲಿದ್ದಾರೆ.
ಬೆಳಗ್ಗೆ 10:45ರಿಂದ 11:45ರವರೆಗೆ ಬಯಲುಸೀಮೆಯ ಬಯಲಾಟ- ಕರಾವಳಿಯ ಯಕ್ಷಗಾನ ಅಂತಃಸಂಬಂಧಗಳು ಎಂಬ ವಿಷಯದ ಕುರಿತು ಕೃಷ್ಣಮೂರ್ತಿ ಹನೂರು ಹಾಗೂ ಪುರುಷೋತ್ತಮ ಬಿಳಿಮಲೆ ಸಂವಾದ ನಡೆಸಲಿದ್ದಾರೆ.
ಅನಂತರ 11:45ರಿಂದ ಅಪರಾಹ್ನ 1:30ರವರೆಗೆ ಡಾ.ಎಂ.ಪ್ರಬಾಕರ ಜೋಶಿ ಅಧ್ಯಕ್ಷತೆಯಲ್ಲಿ ಯಕ್ಷಗಾನ ಕಲಾವಿದ ಬಿಳಿಮಲೆ, ಅಭಿಮಾನದ ಮಾಸ್ಟ್ರು ಬಿಳಿಮಲೆ, ಸಾಹಿತ್ಯ ವಿಮರ್ಶಕ ಬಿಳಿಮಲೆ, ಜಾನಪದ ಚಿಂತಕ ಬಿಳಿಮಲೆ, ರಾಜಧಾನಿಯಲ್ಲಿ ಬಿಳಿಮಲೆ, ಕುಟುಂಬ ಪ್ರೀತಿಯ ಬಿಳಿಮಲೆ ಮತ್ತು ಬಾವ ಬಂಧು ಬಿಳಿಮಲೆ ಎಂಬ ವಿಷಯದ ಕುರಿತು ಅನುಕ್ರಮವಾಗಿ ರಾಧಾಕೃಷ್ಣ ಕಲ್ಚಾರ್, ಅಜಕ್ಕಳ ಗಿರೀಶ್ ಭಟ್, ಕೇಶವ ಶರ್ಮ, ಗಣೇಶ್ ಅಮೀನ್ ಸಂಕಮಾರ್, ಸರವು ಕೃಷ್ಣ ಭಟ್, ಬಿ.ಪದ್ಮನಾ ಗೌಡ-ಗುಲಾಬಿ ಬಿಳಿಮಲೆ ಹಾಗೂ ಶ್ರೀನಿವಾಸ ಕಾರ್ಕಳ ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದಾರೆ.
ಅಪರಾಹ್ನ 2:30ರಿಂದ 3.00ರವರೆಗೆ ‘ಜಾಗತಿಕ ಕಲೆಯಾಗಿ ಯಕ್ಷಗಾನ’ ಎಂಬ ವಿಷಯದ ಕುರಿತು ಪುರುಷೋತ್ತಮ ಬಿಳಿಮಲೆ ಉಪನ್ಯಾಸ ನೀಡಲಿದ್ದಾರೆ.
3:00ರಿಂದ 4:30ರವರೆಗೆ ಕನ್ನಡ ಪ್ರಾಧ್ಯಾಪಕರ ತಾಳಮದ್ದಲೆ ಜರಗಲಿದೆ. ಇದರಲ್ಲಿ ಸುಬ್ರಾಯ ಸಂಪಾಜೆ, ಪುರುಷೋತ್ತಮ ಬಿಳಿಮಲೆ, ಕೇಶವ ಶರ್ಮ, ನಾರಾಯಣ ಎಂ.ಹೆಗಡೆ, ರಾಧಾಕೃಷ್ಣ ಕಲ್ಚಾರ್, ಶ್ರೀಕಾಂತ ಸಿದ್ಧಾಪುರ, ಅಜಕ್ಕಳ ಗಿರೀಶ್ ಭಟ್, ಗಣೇಶ ಅಮೀನ್ ಸಂಕಮಾರ್, ಧನಂಜಯ ಕುಂಬ್ಳೆ ಹಾಗೂ ದಿನಕರ ಪಚ್ಚನಾಡಿ ಭಾಗವಹಿಸಲಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ ಸಂಜೆ 4:30ಕ್ಕೆ ಹಿರಿಯ ಸಾಹಿತ್ಯ ಚಿಂತಕ ಏರ್ಯ ಲಕ್ಷ್ಮೀನಾರಾಯಣ ಆಳ್ವರ ಅಧ್ಯಕ್ಷತೆಯಲ್ಲಿ ಜರಗಲಿದೆ.
ಸಾಹಿತ್ಯ ವಿಮರ್ಶಕ ತಾಳ್ತಜೆ ವಸಂತ ಕುಮಾರ್ ಅಭಿನಂದನಾ ಭಾಷಣ ಹಾಗೂ ವಸಂತ ಶೆಟ್ಟಿ ಬೆಳ್ಳಾರೆ ಶುಭಾಸಂಸನೆ ಮಾಡಲಿದ್ದಾರೆ. ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ತಲ್ಲೂರು ಶಿವರಾಮ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.