×
Ad

ಬೆಳ್ತಂಗಡಿ: ಸಮಾಲೋಚನಾ ಸಭೆ, 'ಸ್ವಚ್ಛತಾ ನೀತಿ 2017'- ಮಾಹಿತಿ ಶಿಬಿರ

Update: 2017-05-18 22:10 IST

ಬೆಳ್ತಂಗಡಿ, ಮೇ 18: ಜಿಪಂ ಮಂಗಳೂರು, ನೆರಿಯ ಗ್ರಾಪಂ ಸಹಭಾಗಿತ್ವದಲ್ಲಿ ನಡೆದ ಅಭಿವೃದ್ಧಿ ಕಾರ್ಯಕ್ರಮಗಳ ಸಮಾ ಲೋಚನಾ ಸಭೆ ಮತ್ತು ಸ್ವಚ್ಛತಾ ನೀತಿ 2017 ಮಾಹಿತಿ ಶಿಬಿರದಲ್ಲಿ ದ.ಕ. ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ ಎಂ. ಆರ್. ರವಿ ಭಾಗವಹಿಸಿ, ಸ್ಥಳೀಯರ ಅಹವಾಲುಗಳನ್ನು ಸ್ವೀಕರಿಸಿ, ವಿವಿಧ ಇಲಾಖಾ ಅಭಿವೃದ್ಧಿ ಅನುದಾನಗಳ ಕಾಮಗಾರಿಗಳ ಶೀಘ್ರವಾಗಿ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗುರುವಾರ ಸೂಚನೆ ನೀಡಿದರು.

ಮೂಲಭೂತ ಸೌಕರ್ಯ ವಂಚಿತ ಬಾಂಜಾರು ಮಲೆಯಲ್ಲಿ ವಿವಿಧ ಇಲಾಖಾ ಅನುದಾನಗಳ ಅಭಿವೃದ್ದಿ ಸಮಾಲೋಚನಾ ಸಭೆಯಲ್ಲಿ ಸ್ಥಳೀಯರ ಬೇಡಿಕೆಯನ್ನು ಆಲಿಸಿದರು. ಆದಿವಾಸಿಗಳಿಗೆ ಇಲಾಖೆಯಿಂದ ಪೌಷ್ಠಿಕ ಆಹಾರಗಳ ಸಾಮಾಗ್ರಿಗಳನ್ನು ಕಕ್ಕಿಂಜೆಯಿಂದ ಖಾಸಾಗಿ ಬಾಡಿಗೆ ವಾಹನದಲ್ಲಿ ಕೊಂಡೊಯ್ಯಬೇಕಾಗಿದೆ. ಇದನ್ನು ಇಲ್ಲಿಯೇ ವಿತರಿಸುವಂತೆ ಸ್ಥಳೀಯರು ಒತ್ತಾಯಿಸಿದರು. ಅಂಗನವಾಡಿಯ ಮೂಲಕವೇ ನೀಡಲಾಗುತ್ತಿದೆ. ಅದನ್ನು ಅಲ್ಲಿಂದಲೇ ಪಡೆದುಕೊಳ್ಳಬೇಕಾಗುತ್ತದೆ ಎಂದು ಇಲಾಖಾಧಿಕಾರಿಗಳು ತಿಳಿಸಿದರು.

ರಸ್ತೆ ಅಭಿವೃದ್ಧಿಗೆ ಒಂದು ಕೋ. ರೂ. ವೆಚ್ಚದ ಕಾಂಕ್ರೀಟಿಕರಣಕ್ಕೆ ಅನುದಾನ ಮಂಜೂರಾಗಿದ್ದು, ಅದರಲ್ಲಿಲ್ಲಿ 30 ಲಕ್ಷದ ಕಾಮಗಾರಿ ಆಗಿದೆ. ಉಳಿದ ಕಾಮಗಾರಿಯನ್ನು ತಕ್ಷಣ ಮಾಡುವಂತೆ ಒತ್ತಾಯಿಸಿದರು.

ಪ್ರಕೃತಿದತ್ತವಾದ ನೀರನ್ನು ಬೇಸಿಗೆಯಲ್ಲಿ ಟ್ಯಾಂಕಿನಲ್ಲಿ ಸಂಗ್ರಹಿಸಿ ಕುಡಿಯುವ ನೀರನ್ನು ಬಳಕೆ ಮಾಡಲಾಗುತ್ತಿತ್ತು. ಕಳೆದ 3 ವರ್ಷಗಳಿಂದ ಸಮರ್ಪಕವಾಗಿಲ್ಲದ ಕಾರಣ ಟ್ಯಾಂಕಿಗೆ ಸಂಪರ್ಕಿಸಲಾಗುವ ಪೈಪ್‌ಗಳನ್ನು ಸರಿಪಡಿಸುವಂತೆ ಒತ್ತಾಯಿಸಿದರು.

ಇದಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಿಇಒ ಅಧಿಕಾರಿಗಳಿಗೆ ಸೂಚಿಸಿದರು. ಬಾಂಜಾರುಮಲೆ ನಿವಾಸಿಗಳು ವಿದ್ಯುತ್ ಸಂಪರ್ಕದ ಬೇಡಿಕೆ ಮುಂದಿಟ್ಟು, ಈ ಹಿಂದೆ ನಡೆಸಿದ ಸರ್ವೆ ಬಗ್ಗೆ ವಿಚಾರಿಸಿದಾಗ ಡಿಪಿಆರ್ ಯೋಜನೆಯಲ್ಲಿ 50 ಕುಟುಂಬಗಳಿಗೆ ತಲಾ 50 ಸಾವಿರದ ಸೋಲಾರ್ ಪ್ಲಾಂಟ್ ವಿತರಣೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಈಗಾಗಲೇ ಮಂಜೂರು ಆಗಿದೆ. ದಟ್ಟ ಕಾಡು ಪ್ರದೇಶ ಆಗಿರುವುದರಿಂದ ಶಾಶ್ವತ ವಿದ್ಯುತ್ ಸಂಪರ್ಕದ ನಿರ್ವಹಣೆ ಕಷ್ಟ. ಅದನ್ನು ಮಾಡಿಲು ಇಲಾಖೆ ಸಿದ್ದವಿದೆ. ನಿರ್ವಹಣೆ ಮಾತ್ರ ಕಷ್ಟವಾಗುತ್ತದೆ ಎಂದು ಮೆಸ್ಕಾಂ ಇಲಾಖಾಧಿಕಾರಿಗಳು ಉತ್ತರಿಸಿದರು.

ಇದೇ ಸಂದರ್ಭ 4 ಮಂದಿ ಫಲಾನುಭವಿಗಳಿಗೆ ಮನೆ ದುರಸ್ತಿ ಬಗ್ಗೆ ಚೆಕ್ ವಿತರಣೆ ಮಾಡಲಾಯಿತು. ಸ್ಥಳೀಯರು ಡಿಸಿ ಕಟ್ಟೆ ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿದರು. ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸಿಇಒ ತಿಳಿಸಿದರು.

ಜಿಪಂ ಸದಸ್ಯೆ ನಮಿತಾ, ತಾಪಂ ಸದಸ್ಯರಾದ ಸೆಬಾಸ್ಟಿನ್, ಕೊರಗಪ್ಪ ಗೌಡ, ನೆರಿಯ ಗ್ರಾಪಂ ಅಧ್ಯಕ್ಷ ಮಹಮ್ಮದ್, ಅಶ್ರಫ್, ಬಾಬು ಗೌಡ, ಚಾರ್ಮಾಡಿ ಗ್ರಾಪಂ ಅಧ್ಯಕ್ಷೆ ಶೈಲಜಾ, ಉಪಾಧ್ಯಕ್ಷೆ ಲೀಲಾವತಿ, ಸದಸ್ಯ ಉಮೇಶ ಗೌಡ, ಡಿಎಚ್‌ಓ ಡಾ ರಾಮಕೃಷ್ಣ ರಾವ್, ಉಪ ಕಾರ್ಯದರ್ಶಿ ಎನ್. ಆರ್. ಉಮೇಶ್, ತಾಪಂ ಕಾರ್ಯನಿರ್ವಾಹಣಾಧಿಕಾರಿ ಸಿ. ಆರ್. ನರೇಂದ್ರ, ಸಮಾಜ ಕಲ್ಯಾಣಾಧಿಕಾರಿ ಮೋಹನ್, ಐಟಿಡಿಪಿಯ ಹೇಮಲತಾ, ಪಿಡಿಓಗಳಾದ ಪ್ರಕಾಶ್ ಶೆಟ್ಟಿ, ಅಜಿತ್, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. 

ಚಾರ್ಮಾಡಿ ಗ್ರಾಪಂನ ಚಿಬಿದ್ರೆಯ ಕೆರೆ ಅಭಿವೃದ್ಧಿ ಯೋಜನೆಯಲ್ಲಿ ಜಿಪಂ ಅನುದಾನದಡಿಯಲ್ಲಿ ನರೇಗಾ ಮೂಲಕ 2 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕೆರೆಯನ್ನು ವೀಕ್ಷಿಸಿದರು. ಬಳಿಕ ಚಾರ್ಮಾಡಿ ಗ್ರಾಮದ ಬಜಿಲ್‌ಮಾರ್ ಎಂಬಲ್ಲಿ ನಿರ್ಮಾಣವಾಗಿಲಿರುವ ಕಿಂಡಿ ಆಣೆಕಟ್ಟಿಗೆ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಸಂಜೆ ಗುರುವಾಯನಕೆರೆಯ ಕೆರೆಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ವೀಕ್ಷಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News