×
Ad

ಗ್ರಾಮ ಸಹಾಯಕನ ಮೇಲೆ ಹಲ್ಲೆ: ನಾಲ್ವರ ವಿರುದ್ಧ ದೂರು

Update: 2017-05-18 23:16 IST

ಮೂಡುಬಿದಿರೆ, ಮೇ 18: ಕುಟುಂಬದ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಿಮಿತ್ತ ಬಂದಿದ್ದ ಗ್ರಾಮ ಸಹಾಯಕರೊಬ್ಬರನ್ನು ಅವರದೇ ಸಹೋದರರು ಹಾಗೂ ಸಂಬಂಧಿಕರು ರಾಡ್‌ನಿಂದ ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ.

ನೆಲ್ಲಿಕಾರು ಗ್ರಾಮ ಪಂಚಾಯತ್‌ನಲ್ಲಿ ಗ್ರಾಮ ಸಹಾಯಕನಾಗಿರುವ ರಮಾನಂದ ಕೋಟ್ಯಾನ್ ಹಲ್ಲೆಗೊಳಗಾದವರು ಎಂದು ಗುರುತಿಸಲಾಗಿದೆ. ತಮ್ಮ ಕುಟುಂಬಸ್ಥರ ಮನೆಯಾದ ಧಾರ್ಮಿಕ ಕಾರ್ಯಕ್ರಮವಿದ್ದ ನಿಮಿತ್ತ ಆಹ್ವಾನದ ಮೇರೆಗೆ ಹೋಗಿದ್ದರು ಎಂದು ತಿಳಿದುಬಂದಿದೆ.

ರಾತ್ರಿ ಸುಮಾರು 11 ಗಂಟೆಯ ಹೊತ್ತಿಗೆ ರಮಾನಂದ ಕಾರ್ಯಕ್ರಮ ಮುಗಿದು ಊಟ ಮಾಡುತ್ತಿದ್ದ ವೇಳೆ ಹಿಂದಿನಿಂದ ಬಂದ ಅವರ ಸಹೋದರ ಪುಣೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿರುವ ರವಿ ಕೋಟ್ಯಾನ್ ಕಬ್ಬಿಣದ ರಾಡ್‌ನಿಂದ ಹೊಡೆದಿದ್ದು ಈ ಸಂದರ್ಭ ಗಾಯಗೊಂಡ ರಮಾನಂದರ ಮೇಲೆ ಅಲ್ಲೇ ಇದ್ದ ಇನ್ನೋರ್ವ ಸಹೋದರ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯೊಂದರ ಉದ್ಯೋಗಿಯಾಗಿರುವ ಸುರೇಶ್ ಕೋಟ್ಯಾನ್, ರಮಾನಂದರ ಬಾವ ಸದಾನಂದ ಪೂಜಾರಿ ಹಾಗೂ ಅಕ್ಕನ ಮಗ ರಂಜಿತ್ ಕೂಡಾ ಜೊತೆ ಸೇರಿ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ.

ಗಾಯಗೊಂಡು ಬಿದ್ದಿದ್ದ ರಮಾನಂದರನ್ನು ಮೂಡುಬಿದಿರೆ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಮಾನಂದ ಅವರ ತಂದೆಯ ಮನೆ ಅಳಿಯೂರು ಹೊಸ ಒಕ್ಲು ಎಂಬಲ್ಲಿದ್ದು, ಜಾಗದ ಸಂಬಂಧವಾಗಿ ಸಹೋದರರ ನಡುವೆ ವೈಮನಸ್ಸಿತ್ತೆಂದು ತಿಳಿದುಬಂದಿದೆ.

 ಜಾಗದ ಬಗ್ಗೆ ಮೂಡುಬಿದಿರೆ ನ್ಯಾಯಾಲಯದಲ್ಲಿ ರಮಾನಂದ ಅವರು ಕೇಸು ದಾಖಲಿಸಿದ್ದು, ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಆದರೆ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಆರೋಪಿಗಳು ಜಾಗದಲ್ಲಿ ಇಂಟರ್‌ಲಾಕ್ ಅಳವಡಿಸುವ ಕಾರ್ಯ ನಡೆಸಿದ್ದರಿಂದ ಮೂಡುಬಿದಿರೆ ಠಾಣೆಯಲ್ಲಿ ರಮಾನಂದ ದೂರು ನೀಡಿದ್ದರು.

ಪೊಲೀಸ್ ದೂರು ನೀಡಿದರೆ ಅಥವಾ ನ್ಯಾಯಾಲಯದ ಮೆಟ್ಟಿಲು ಹತ್ತಿದರೆ ಕಾರಿನಿಂದ ಢಿಕ್ಕಿ ಹೊಡೆಸಿ ಕೊಲ್ಲುವುದಾಗಿ ರಮಾನಂದ ಅವರಿಗೆ ಜೀವ ಬೆದರಿಕೆ ಒಡ್ಡಿರುವುದಾಗಿಯೂ ದೂರಿನಲ್ಲಿ ವಿವರಿಸಲಾಗಿದೆ.

ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ಮುಂದುವರಿಸುವಂತೆ ತಿಳಿಸಿದ್ದರೂ ರಾಜಕೀಯ ಒತ್ತಡ ಬಳಸಿ ನನ್ನನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ರಮಾನಂದ ಆರೋಪಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News