ಉಡುಪಿಯಲ್ಲಿ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ: ಸಚಿವ ಪ್ರಮೋದ್ ಮಧ್ವರಾಜ್

Update: 2017-05-18 18:22 GMT

ಉಡುಪಿ,ಮೇ 18: ಕರಾವಳಿ ಜಿಲ್ಲೆಗಳು ಹಾಗೂ ಆಸುಪಾಸಿನ ಜಿಲ್ಲೆಗಳಲ್ಲಿರುವ ಬ್ಯಾಡ್ಮಿಂಟನ್ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಲು ಉಡುಪಿ ಯಲ್ಲಿ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯನ್ನು ಪ್ರಾರಂಭಿಸಲಾ ಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ವತಿಯಿಂದ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಇಂದಿನಿಂದ 21ರವರೆಗೆ ನಡೆಯುವ ಪ್ರಕಾಶ್ ಎಂ.ಕೊಡವೂರು ಸ್ಮಾರಕ ಕರ್ನಾಟಕ ರಾಜ್ಯ ಜೂನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಗೆ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.

ಇದಕ್ಕಾಗಿ ಕ್ರೀಡಾ ಇಲಾಖೆ ಜಿಲ್ಲೆಯವರೇ ಆದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರೊಂದಿಗೆ ಮಾತನಾಡಿದೆ ಎಂದರು.

ಅಕಾಡೆಮಿ ಇಲ್ಲಿ ಬ್ಯಾಡ್ಮಿಂಟನ್ ಪ್ರತಿಭೆಗಳನ್ನು ಗುರುತಿಸಿ, ತರಬೇತಿ ನೀಡಲಿದೆ ಎಂದರು.
ಅಜ್ಜರಕಾಡಿನ ಒಳಾಂಗಣ ಕ್ರೀಡಾಂಗಣದಲ್ಲಿರುವ ಬ್ಯಾಡ್ಮಿಂಟನ್ ಕೋರ್ಟ್ ಗಳಿಗೆ ಹವಾನಿಯಂತ್ರಣವನ್ನು (ಎಸಿ) ಅಳವಡಿಸಲು ಒಂದು ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಪ್ರಾರಂಭ ಗೊಳ್ಳಲಿದೆ ಎಂದು ತಿಳಿಸಿದರು.

ಬ್ಯಾಡ್ಮಿಂಟನ್ ಕೋರ್ಟ್‌ಗೆ ಈಗಾಗಲೇ 46 ಲಕ್ಷ ರೂ. ವೆಚ್ಚದಲ್ಲಿ ಮರದ ಪ್ಲೋರಿಂಗ್‌ನ್ನು ಅಳವಡಿಸಲಾಗಿದೆ. ಅಲ್ಲದೇ ಸಿಂಥೆಟಿಕ್ ಮ್ಯಾಟ್ ಅಳವಡಿಕೆಗೆ 31ಲಕ್ಷ ರೂ. ಮಂಜೂರು ಮಾಡಲಾಗಿದೆ ಎಂದೂ ಅವರು ಅವರು ಹೇಳಿದರು.

ಪ್ರಕಾಶ್ ಕೊಡವೂರು ಸ್ಮಾರಕ ರಾಜ್ಯ ಜೂನಿಯರ್ ರ್ಯಾಂಕಿಂಗ್ ಟೂರ್ನಿಯಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ಇಂದು ನಡೆದಿದ್ದು, ನಾಳೆಯಿಂದ ಮೂರು ದಿನಗಳ ಕಾಲ ಪ್ರದಾನ ಟೂರ್ನಿ ನಡೆಯಲಿದೆ. 17ವರ್ಷ ಕೆಳಗಿನ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್ ಮತ್ತು ಡಬಲ್ಸ್, 19ವರ್ಷ ಕೆಳಗಿನ ಬಾಲಕ ಮತ್ತು ಬಾಲಕಿಯರ ಸಿಂಗಲ್ಸ್, ಡಬಲ್ಸ್ ಮತ್ತು ಮಿಕ್ಸೆಡ್ ಡಬಲ್ಸ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ರಾಜ್ಯದಾದ್ಯಂತದಿಂದ ಸುಮಾರು 275 ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News