ಹಿಮಾಚಲದಲ್ಲೊಬ್ಬ ಬಾಬಾ ಅಮರದೇವ್ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು
ಶಿಮ್ಲಾ,ಮೇ 19 : ವಿವಾದಿತ ದೇವ ಮಾನವ ಬಾಬಾ ಅಮರದೇವ್ ಹಿನ್ನೆಲೆಯನ್ನು ಪೊಲೀಸರು ತನಿಖೆ ನಡೆಸಲು ಮುಂದಡಿಯಿಡುತ್ತಿದ್ದಂತೆಯೇ ಇತ್ತೀಚೆಗೆ ಸೋಲನ್ ಜಿಲ್ಲೆಯ ರುರ್ರಾ ಗ್ರಾಮದಲ್ಲಿ ನಡೆದ ಘರ್ಷಣೆಯ ಬಳಿಕ ಶಿಮ್ಲಾದ ಐಜಿಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಅಮರದೇವ್ ಅಲ್ಲಿಂದ ಮೌನವಾಗಿ ತಪ್ಪಿಸಿಕೊಂಡಿದ್ದಾರೆ.
ಶಿಮ್ಲಾದ ಐಜಿ ಝಹುಲ್ ಎಚ್ ಝೈದಿ ಅವರ ಮೂಲಕ ಬಾಬಾ ಅಮರದೇವ್ ಹಿನ್ನೆಲೆಯನ್ನು ತನಿಖೆಗೊಳಪಡಿಸಬೇಕೆಂದು ಎಪ್ರಿಲ್ 26ರ ಘರ್ಷನೆಯ ಬಳಿಕ ಸುಮಾರು ಒಂದು ಡಜನಿಗೂ ಅಧಿಕ ಗ್ರಾಮಗಳ ಜನರು ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರನ್ನು ಒತ್ತಾಯಿಸಿದ್ದರು. ಅಮರದೇವ್ ಅವರನ್ನು ಮತ್ತೆ ತಮ್ಮ ಗ್ರಾಮಕ್ಕೆ ಪ್ರವೇಶಿಸಲು ಅನುಮತಿಸುವುದಿಲ್ಲವೆಂದೂ ಗ್ರಾಮಸ್ಥರು ಪ್ರತಿಜ್ಞೆಗೈದಿದ್ದರು.
ಆದರೆ ಐಜಿ ಬರುವಷ್ಟರಲ್ಲಿ ಅಮರದೇವ್ ಆಸ್ಪತ್ರೆಯಲ್ಲಿರಲಿಲ್ಲ. ‘‘ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸುವಂತೆ ಅವರೇ ಕೇಳಿಕೊಂಡಿದ್ದರು. ಅವರ ಕೆಲ ಸಹವರ್ತಿಗಳು ಆಸ್ಪತ್ರೆಗೆ ಬುಧವಾರ ಆಗಮಿಸಿದ್ದರು. ಅವರೊಂದಿಗೆ ಖಾಸಗಿ ವಾಹನದಲ್ಲಿ ಅವರೆಲ್ಲಿಗೆ ಹೋದರೆಂದು ತಿಳಿದಿಲ್ಲ,’’ ಎಂದು ಆಸ್ಪತ್ರೆಯ ಹಿರಿಯ ಮೆಡಿಕಲ್ ಸುಪರಿಂಟೆಂಡೆಂಟ್ ಡಾ.ರಮೇಶ್ ಚಂದ್ ಹೇಳಿದ್ದಾರೆ.
ಅಮರದೇವ್ ಆಸ್ಪತ್ರೆಯಲ್ಲಿದ್ದಾಗ ಅವರನ್ನು ಭೇಟಿಯಾದ ಗಣ್ಯರಲ್ಲಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಹಾಗೂ ಆರೋಗ್ಯ ಸಚಿವ ಕೌಲ್ ಸಿಂಗ್ ಠಾಕುರ್ ಇದ್ದರೆಂಬುದು ವಿಶೇಷ. ಆದರೆ ತನಿಖೆಗೆ ಗ್ರಾಮಸ್ಥರಿಂದ ಒತ್ತಡ ಹೆಚ್ಚಿದಾಗ ಮಣಿದ ಮುಖ್ಯಮಂತ್ರಿ ನಿಷ್ಪಕ್ಷಪಾತ ತನಿಖೆಯ ಆಶ್ವಾಸನೆ ನೀಡಿ ಐಜಿ ಯನ್ನು ಗ್ರಾಮಕ್ಕೆ ಕಳುಹಿಸಿದ್ದರು. ಅಲ್ಲಿಗೆ ತೆರಳಿದ ಐಜಿ ಗ್ರಾಮಸ್ಥರೊಡನೆ ಮಾತುಕತೆ ನಡೆಸಿ ಶಿಮ್ಲಾಕ್ಕೆ ತೆರಳಿದ್ದರು.
ಘಟನೆಯ ಸಂಪೂರ್ಣ ತನಿಖೆಗೆ ಮುಖ್ಯಮಂತ್ರಿ ಒಂದು ವಾರ ಕಾಲಾವಕಾಶ ಕೇಳಿದ್ದಾರೆಂದು ತುಂಡಲ್ ಪಂಚಾಯತ್ ಅಧ್ಯಕ್ಷ ಪ್ರವೀಣ್ ಕುಮಾರ್ ಹೇಳಿದ್ದಾರೆ. 54 ವರ್ಷದ ಮಹಿಳೆಯೊಬ್ಬಳು ಗಾಯಗೊಂಡ ಈ ಘರ್ಷಣೆಯಲ್ಲಿ ಅಮರದೇವ್ ಪಾತ್ರವೇನೆಂದು ತನಿಖೆ ನಡೆಸಲು ಗ್ರಾಮಸ್ಥರು ಆಗ್ರಹಿಸಿದ್ದರು. ಘಟನೆಯ ನಂತರ ಕಂದಘಾಟ್ ಠಾಣೆಯಲ್ಲಿ ಎರಡು ಎಫ್‌ಐಆರ್ ದಾಖಲಾಗಿದ್ದರೂ ಮುಖ್ಯಮಂತ್ರಿ ಅಮರದೇವ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾದ ನಂತರ ಠಾಣೆಯ ಎಲ್ಲಾ ಪೊಲೀಸರನ್ನೂ ವರ್ಗಾಯಿಸಲಾಗಿತ್ತು.
ಅಮರದೇವ್ ವಿರುದ್ಧ ಗ್ರಾಮಸ್ಥರು ಎಫ್‌ಐಆರ್ ದಾಖಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರು ದೇವಮಾನವ ದಾಖಲಿಸಿದದೂರಿನನ್ವಯ ಏಳು ಮಂದಿ ಗ್ರಾಮಸ್ಥರನ್ನು ಬಂಧಿಸಿದ್ದಾರೆ.
ಆತ ದೇವಳವೊಂದನ್ನು ನಿರ್ಮಿಸಲು ಏಳು ಬಿಘಾ ಸರಕಾರಿ ಜಾಗವನ್ನು ಒತ್ತುವರಿ ಮಾಡಿದ್ದಾನೆಂದು ಗ್ರಾಮಸ್ಥರು ಈಗ ಆರೋಪಿಸುತ್ತಿದ್ದಾರೆ.