ಕಯ್ಯಾರು ವ್ಯಾಪಾರಿಯ ಕೊಲೆ ಪ್ರಕರಣ: ಆರೋಪಿಗಳು ಪೊಲೀಸ್ ಕಸ್ಟಡಿಗೆ
ಕಾಸರಗೋಡು, ಮೇ 19: ಕಯ್ಯಾರು ಮಂಡೆಕಾಪು ವ್ಯಾಪಾರಿ ರಾಮಕೃಷ್ಣ ಮೂಲ್ಯ (46) ರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ನಾಲ್ವರು ಆರೋಪಿಗಳನ್ನು ಕಾಸರಗೋಡು ಮೆಜಿಸ್ಟ್ರೇಟ್ ನ್ಯಾಯಾಲಯ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಎಡನೀರು ಚೂರಿಮೂಲೆಯ ಬಿ.ಎಂ. ಉಮರ್ ಫಾರೂಕ್ (36), ಪೊವ್ವಲ್ ನ ನೌಶಾದ್ ಶೇಕ್(33), ಬೋವಿಕ್ಕಾನ ಎಂಟನೇ ಮೈಲಿನ ಅಬ್ದುಲ್ ಆರೀಫ್ ಯಾನೆ ಅಚ್ಚು(33) ಮತ್ತು ಚೆಂಗಳ ರಹಮತ್ ನಗರದ ಕೆ. ಅಶ್ರಫ್(23) ರನ್ನು ಕಸ್ಟಡಿಗೆ ಒಪ್ಪಿಸಲಾಗಿದ್ದು , ನಾಲ್ವರು ಆರೋಪಿಗಳನ್ನು ಹೊಸದುರ್ಗ ಪ್ರಥಮ ದರ್ಜೆ ಜ್ಯುಡಿಶಿಯಲ್ ನ್ಯಾಯಾಲಯ ಮೆಜಿಸ್ಟ್ರೇಟ್ ರ ಸಮ್ಮುಖದಲ್ಲಿ ಗುರುತು ಹಚ್ಚುವ ಪರೇಡ್ ನೆಡೆಸಲಾಯಿತು. ರಾಮಕೃಷ್ಣರ ಕೊಲೆ ನಡೆದ ಸಂದರ್ಭ ಸಾಕ್ಷಿಗಳಾಗಿದ್ದ ಇಬ್ಬರು ಗುರುತು ಪತ್ತೆ ಹಚ್ಚುವ ಪರೇಡ್ ಗೆ ತಲಪಿದ್ದರು.
ಆರೋಪಿಗಳನ್ನು ಗುರುತು ಹಚ್ಚುವ ಪರೇಡ್‌ಗೆ ಒಳಪಡಿಸುವಂತೆ ಕುಂಬಳೆ ಪೊಲೀಸರು ಕಾಸರಗೋಡು ಸಿಜೆಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಗುರುತು ಹಚ್ಚುವ ಪರೇಡ್ ನಡೆಸುವ ಹೊಣೆಗಾರಿಕೆಯನ್ನು ಸಿಜೆಎಂ ನ್ಯಾಯಾಲಯ ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (ದ್ವಿತೀಯ)ದ ಮೆಜಿಸ್ಟ್ರೇಟ್‌ರಿಗೆ ವಹಿಸಿತ್ತು. ಅದರಂತೆ ಕಾಸರಗೋಡು ಸಬ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳನ್ನು ಹೊಸದುರ್ಗ ಮೆಜಿಸ್ಟ್ರೇಟ್‌ರ ಸಾನಿಧ್ಯದಲ್ಲಿ ಸಾಕ್ಷಿದಾರರಿಂದ ಗುರುತು ಹಚ್ಚುವ ಪರೇಡ್‌ಗೆ ಒಳಪಡಿಸಲಾಗಿದೆ.
ಇದೇ ವೇಳೆ ರಾಮಕೃಷ್ಣ ಮೂಲ್ಯರ ಕೊಲೆಗೆ ಬಳಸಿದ ಮೂರು ಆಯುಧಗಳನ್ನು ಇದುವರೆಗೆ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಆರೋಪಿಗಳನ್ನು ಕೃತ್ಯ ನಡೆಸಿದ ಸ್ಥಳ ಹಾಗೂ ತಲೆಮರೆಸಿಕೊಂಡಿದ್ದ ಸ್ಥಳ, ಮಾರಕಾಸ್ತ್ರ ಎಸೆದ ಸ್ಥಳಕ್ಕೆ ಕರೆದೊಯ್ದು ಹೆಚ್ಚಿನ ಮಾಹಿತಿ ಕಲೆ ಹಾಕಲು ತನಿಖಾ ತಂಡ ತೀರ್ಮಾನಿಸಿದೆ.
ಕೃತ್ಯದ ಬಳಿಕ ಆರೋಪಿಗಳು ದೇರಳಕಟ್ಟೆ, ಬೆಂಗಳೂರು, ಹೈದರಾಬಾದ್ ಮೊದಲಾದೆಡೆಗಳಿಗೆ ಪರಾರಿಯಾಗಿ ತಲೆಮರೆಸಿಕೊಂಡಿದ್ದರು. ಆದ್ದರಿಂದ ಆರೋಪಿಗಳನ್ನು ಆ ಪ್ರದೇಶಗಳಿಗೆ ಕರೆದೊಯ್ದು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಪೊಲೀಸರು ನಿರ್ಧರಿಸಿದ್ದಾರೆ.