×
Ad

ಮೇ 21: ಆಳ್ವಾಸ್ ಮೋಟೋರಿಂಗ್

Update: 2017-05-19 18:06 IST

ಮಂಗಳೂರು, ಮೇ 19: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಡಿ ‘ಆಳ್ವಾಸ್ ಮೋಟೋರಿಂಗ್-2017’ರ ನಾಲ್ಕನೆ ಆವೃತ್ತಿಯ ‘ಆಟೊ ಎಕ್ಸ್‌ಪೋ’ಕ್ಕೆ ಮಿಜಾರ್‌ನ ಶೋಭಾವನ ಆವರಣದಲ್ಲಿ ಮೇ 21ರಂದು ಬೆಳಗ್ಗೆ 10:45ಕ್ಕೆ ಚಾಲನೆ ನೀಡಲಾಗುವುದು ಎಂದು ಮೂಡುಬಿದಿರೆಯ ಬೆದ್ರ ಅಡ್ವೆಂಚರಸ್ ಕ್ಲಬ್‌ನ ಅಧ್ಯಕ್ಷ ಅಕ್ಷಯ ಜೈನ್ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಳ್ವಾಸ್ ಮೋಟೋರಿಂಗ್ ಪ್ರತೀ ವರ್ಷದಂತೆ ಹಲವು ಆಕರ್ಷಣೆಗಳೊಂದಿಗೆ ಜನಮನ ಸೆಳೆಯಲಿದೆ. ವಿವಿಧ ಬಗೆಯ ವಾಹನಗಳ ಪ್ರದರ್ಶನ (ಸೂಪರ್ ಬೈಕ್ಸ್, ಸೂಪರ್ ಕಾರ್ಸ್‌, ಲಕ್ಸುರಿ ಕಾರ್ಸ್‌, ವಿಂಟೇಜ್ ಕಾರ್ಸ್‌) ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ಚಾಲಕರು ಮತ್ತು ಸವಾರರಿಂದ ವಿಭಿನ್ನ ಶೈಲಿಯ ವಾಹನಗಳ ಡ್ರಾಗ್ ಆ್ಯಂಡ್ ಡ್ರೀಫ್ಟ್ ಸ್ಟಂಟ್ ಪ್ರದರ್ಶನ ನಡೆಯಲಿದೆ ಎಂದರು.

ಈ ಎಕ್ಸ್‌ಪೋದಲ್ಲಿ 200ಕ್ಕೂ ಹೆಚ್ಚು ದ್ವಿಚಕ್ರ ವಾಹನ ಹಾಗೂ ಕಾರುಗಳ ನವೀನ ಹಾಗೂ ವಿಂಟೇಜ್ ಮಾದರಿಯ ಜೊತೆಯಲ್ಲಿ ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುವ ವಾಹನಗಳನ್ನು ವೀಕ್ಷಿಸಬಹುದಾಗಿದೆ.

ಕಾರ್ಯಕ್ರಮವನ್ನು ಅಧಾನಿ ಯುಪಿಸಿಎಲ್ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಕಿಶೋರ್ ಆಳ್ವ ಉದ್ಘಾಟಿಸಲಿದ್ದಾರೆ. ಇಂಡಿಯನ್ ರ್ಯಾಲಿ ಚಾಂಪಿಯನ್‌ಶಿಪ್‌ನ ಅಶ್ವಿನ್ ನಾಯ್ಕಿ, ಮೂಡುಬಿದಿರೆಯ ವಿಶ್ವಾಸ್ ಬಾವಾ ಬಿಲ್ಡರ್ಸ್‌ ಮಾಲಕ ಅಬೂಲಾಲ್ ಪುತ್ತಿಗೆ, ಕರಾವಳಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಗಣೇಶ್ ರಾವ್, ಮೂಡುಬಿದಿರೆಯ ಚೌಟರ ಅರಮನೆಯ ಕುಲದೀಪ್ ಎಂ., ಮಂಗಳೂರಿನ ಮಾಂಡವಿ ಪ್ರೈವೇಟ್ ಲಿ.ನ ನಿರ್ದೇಶಕ ಸಂಜಯ್ ರಾವ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ದ.ಕ. ಜಿಲ್ಲೆ ಹಾಗೂ ಸುತ್ತಮುತ್ತಲಿನ ಪ್ರದೇಶದ ವಿದ್ಯಾರ್ಥಿ ಸಮೂಹದಲ್ಲಿ ವಾಹನಗಳೆಡೆಗಿನ ಹೊಸ ಬಗೆಯ ಕಲಿಕೆಗೆ ಅವಕಾಶ ನೀಡಲಾಗುವುದು. ವಿದ್ಯಾರ್ಥಿ ಸಮೂಹದಲ್ಲಿ ವಾಹನಗಳ ಬಗ್ಗೆ ಆಸಕ್ತಿಯನ್ನು ಮೂಡಿಸುವುದರ ಜತೆಗೆ ಇಂಜಿನ್‌ಗಳ ನಿರ್ಮಾಣ, ಉಪಯೋಗ, ಬಿಡಿಭಾಗಗಳ ಉತ್ಪಾದನೆ ಹಾಗೂ ಅವುಗಳ ಬಳಕೆಯ ವಿಪುಲ ಅವಕಾಶ ನೀಡಲಾಗುವುದು. ಹೊಸ ಮಾದರಿಯ ವಾಹನಗಳ ಕಾರ್ಯವೈಖರಿಯ ಪರಿಚಯದ ಜತೆಗೆ ನವನವೀನ ಮಾದರಿಯ ಕಾರುಗಳ ವೈಶಿಷ್ಟವನ್ನು ಈ ಕಾರ್ಯಕ್ರಮ ತಿಳಿಸುತ್ತದೆ ಎಂದು ಹೇಳಿದರು.

ಜೈಪುರದ ನ್ಯಾಶನಲ್ ಫ್ರೀ ಸ್ಟೈಲ್ ಮೋಟರ್ ಸ್ಪೋಟ್ಸ್ ರೈಡರ್ ಗೌರವ್ ಖಾತ್ರಿ ಹಾಗೂ ಅವರ ತಂಡ ಸೈಕ್ಲೋನ್‌ದಿಂದ ವಿವಿಧ ಬಗೆಯ ಸಿಕ್ವೇನ್ಸಿಯಲ್ ಸ್ಟಂಟ್‌ಗಳನ್ನು ಪ್ರದರ್ಶಿಸಲಿದೆ. ಮಂಗಳೂರಿನ ಇಂಡಿಯನ್ ರ್ಯಾಲಿ ಚಾಂಪಿಯನ್ ರಾಹುಲ್ ಕಾಂತರಾಜ್‌ರಿಂದ ರ್ಯಾಲಿ ಸಿಕ್ವೇನ್ಸ್ ಸ್ಟಂಟ್‌ಗಳ ಪ್ರದರ್ಶನವಿದೆ. ಇಂಡಿಯನ್ ಮೋಟರ್ ರ್ಯಾಲಿ ಸೂಪರ್ ಕ್ರಾಸ್ ಚಾಂಪಿಯನ್ನರಾದ ಅದ್ನಾನ್ ಹಾಗೂ ಸುದೀಪ್ ಕೊಠಾರಿ ಅವರಿಂದ ಸೂಪರ್ ಕ್ರಾಸ್ ಸಿಕ್ವೇನ್ಸ್ ಮತ್ತು ಸ್ಟಂಟ್, ಉಡುಪಿಯ ಹಾಟ್ ಪಿಸ್ಟನ್ಸ್ ಗ್ರೂಪಿನಿಂದ ದ್ವಿಚಕ್ರ ವಾಹನಗಳಿಂದ ಫ್ರೀ ಸ್ಟೈಲ್ ಸ್ಟಂಟ್‌ಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಜೈಪುರದ ನ್ಯಾಶನಲ್ ಫ್ರೀ ಸ್ಟೈಲ್ ಮೋಟರ್ ಸ್ಪೋಟ್ಸ್ ರೈಡರ್ ಗೌರವ್ ಖಾತ್ರಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮೋಟೋರಿಂಗ್‌ನ ಸಂಯೋಜಕ ಮುದ್ದುಕೃಷ್ಣ, ಉಪನ್ಯಾಸಕ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News