×
Ad

ಕಾರ್ಮಿಕರು ದೇಶದ ಬೆನ್ನೆಲುಬು: ನ್ಯಾ.ಕಿಶನ್ ಬಿ ಮಡಲಗಿ

Update: 2017-05-19 18:27 IST

ಪುತ್ತೂರು, ಮೇ 19: ಆಧುನಿಕ ಭಾರತ ನಿರ್ಮಾಣದಲ್ಲಿ ಕಾರ್ಮಿಕರ ಪಾಲು ಮಹತ್ತರವಾಗಿದ್ದು, ಈ ನಿಟ್ಟಿನಲ್ಲಿ ರೈತರಂತೆ ಕಾರ್ಮಿಕರೂ ದೇಶದ ಬೆನ್ನೆಲುಬಾಗಿದ್ದಾರೆ. ಕಾರ್ಮಿಕರು ತಮ್ಮ ಹಕ್ಕುಗಳ ಕುರಿತು ಅರಿವು ಪಡೆದುಕೊಳ್ಳಬೇಕು ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಮ್.ಎಫ್.ಸಿ ಕಿಶನ್ ಬಿ ಮಡಲಗಿ ಹೇಳಿದರು.

ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು, ನ್ಯಾಯ ವಾದಿಗಳ ಸಂಘ ಪುತ್ತೂರು, ಕಾರ್ಮಿಕ ಇಲಾಖೆ ಮತ್ತು ಕ್ಯಾಂಪ್ಕೋ ಚಾಕಲೇಟು ಫ್ಯಾಕ್ಟರಿ ಪುತ್ತೂರು ಇದರ ಸಹಯೋಗದಲ್ಲಿ ಶುಕ್ರವಾರ ಕಾರ್ಮಿಕ ದಿನಾಚರಣೆ ಅಂಗವಾಗಿ ಪುತ್ತೂರಿನ ಕ್ಯಾಂಪ್ಕೋ ಫ್ಯಾಕ್ಟರಿಯ ಆವರಣದಲ್ಲಿ ನಡೆದ ‘ಕಾರ್ಮಿಕರಿಗೆ ಕಾನೂನು ಮಾಹಿತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾದ ನ್ಯಾಯವಾದಿ ಮಹೇಶ್ ಕಜೆ ಮಾತನಾಡಿ ಪ್ರೀತಿಯ ಜೊತೆ ಸಂಪತ್ತು, ಕೀರ್ತಿ, ಯಶಸ್ಸು ಬರುತ್ತದೆ ಅದೇ ರೀತಿ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿನ ವೃತ್ತಿ ನಿರತ ಕಾರ್ಮಿಕರು ಮತ್ತು ಆಡಳಿತ ಮಂಡಳಿಯ ಉತ್ತಮ ಪ್ರೀತಿಯ ಬಾಂಧವ್ಯದಿಂದ ಚಾಕಲೇಟು ದೇಶ ವಿದೇಶ ಪ್ರಸಿದ್ಧಿಯಾಗಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಭಾಸ್ಕರ್ ಕೋಡಿಂಬಾಳ ಮಾತನಾಡಿ ದುಡಿಯುವ ವರ್ಗ ಮತ್ತು ದುಡಿಸುವವರ ವರ್ಗಗಳ ನಡುವಿನ ಉತ್ತಮ ಬಾಂಧವ್ಯದಿಂದ ಸಂಸ್ಥೆ ಪ್ರಗತಿಯನ್ನು ಕಾಣುತ್ತದೆ. ದುಡಿಯದೆ ಪಡೆಯುವ ವೇತನ ಕಳ್ಳತನಕ್ಕೆ ಸಮಾನ. ಸಂಸ್ಥೆಯ ಅಭಿವೃದ್ಧಿಯಿಂದ ಕಾರ್ಮಿಕರ ಅಭಿವೃದ್ಧಿ ಅಗುತ್ತದೆ. ಈ ನಿಟ್ಟಿನಲ್ಲಿ ಕಾರ್ಮಿಕರು ತಮ್ಮ ನಿಷ್ಠೆಯಿಂದ ತಮ್ಮ ಕರ್ತವ್ಯ ಮಾಡಬೇಕು. ಅದಕ್ಕೆ ತಕ್ಕಂತೆ ಉತ್ತಮ ಸೌಲಭ್ಯ ಸಂಸ್ಥೆ ನೀಡುತ್ತದೆ. ಜೊತೆಗೆ ಕಾರ್ಮಿಕರಿಗಾಗಿ ಇರುವ ಕಾನೂನು ಅರಿವು ಇರಬೇಕೆಂದರು.

ಹಿರಿಯ ಕಾರ್ಮಿಕ ನಿರೀಕ್ಷಕ ಎಚ್. ರಾಮಚಂದ್ರ ಕಾರ್ಮಿಕ ಕಾಯಿದೆಗಳ ಕುರಿತು ಮಾಹಿತಿ ನೀಡಿದರು. ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯ ಎ.ಜಿ.ಎಮ್ ಫ್ರಾನ್ಸಿಸ್ ಡಿ ಸೋಜ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಉದಯಶಂಕರ್ ಎನ್.ಎಸ್, ವಕೀಲರ ಸಂಘದ ಖಜಾಂಚಿ ಕುಮಾರನಾಥ ಎಸ್, ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯ ಎಂಪ್ಲಾಯಿಸ್ ಯೂನಿಯನ್‌ನ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಎ.ಜಿ.ಎಮ್‌ಗಳಾದ ಕರುಣಾಕರ ಶೆಟ್ಟಿಗಾರ್, ಅನುಫ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ್ಯಾಂಪ್ಕೋ ಸಂಸ್ಥೆಯ ಶ್ರೀಕೃಷ್ಣ ಭಟ್ ಸ್ವಾಗತಿಸಿದರು. ವಕೀಲರ ಸಂಘದ ಕಾರ್ಯದರ್ಶಿ ನ್ಯಾಯವಾದಿ ಕೃಷ್ಣ ಪ್ರಸಾದ್ ರೈ ವಂದಿಸಿದರು. ಬೊಳುವಾರು ಸಾಂಸ್ಕೃತಿಕ ಕಲಾ ಕೇಂದ್ರದ ಅಧ್ಯಕ್ಷ ಚಿದಾನಂದ ಕಾಮತ್ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News