×
Ad

ಚುನಾವಣಾ ಆಯೋಗದ ‘ಇವಿಎಂ ಸವಾಲು’ ಪ್ರಾತ್ಯಕ್ಷಿಕೆಗೆ ವೇಳಾಪಟ್ಟಿ ನಾಳೆ ಪ್ರಕಟ

Update: 2017-05-19 19:17 IST

 ಹೊಸದಿಲ್ಲಿ,ಮೇ 19: ತನ್ನ ವಿದ್ಯುನ್ಮಾನ ಮತದಾನ ಯಂತ್ರ(ಇವಿಎಂ)ಗಳನ್ನು ತಿರುಚುವಂತೆ ರಾಜಕೀಯ ಪಕ್ಷಗಳಿಗೆ ಸವಾಲು ಹಾಕಿರುವ ಚುನಾವಣಾ ಆಯೋಗಅವುಗಳಿಂದ ಪ್ರಾತ್ಯಕ್ಷಿಕೆಗಾಗಿ ಸಮಯ ಮತ್ತು ದಿನಾಂಕವನ್ನು ಶನಿವಾರ ಪ್ರಕಟಿಸಲಿದೆ.

 ಇತ್ತೀಚಿನ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಚಂಡ ಗೆಲುವಿಗೆ ಇವಿಎಂಗಳಲ್ಲಿ ಕೈವಾಡ ನಡೆಸಿರುವುದು ಕಾರಣ ಎಂದು ಬಿಎಸ್‌ಪಿ,ಆಪ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಆರೋಪಿಸಿದ್ದವು. ಇದನ್ನು ಚುನಾವಣಾ ಆಯೋಗವು ನಿರಾಕರಿಸಿದ್ದು, ಮೇ 12ರಂದು ನಡೆದಿದ್ದ ಸರ್ವಪಕ್ಷ ಸಭೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ನಸೀಂ ಝೈದಿ ಅವರು, ಇತ್ತೀಚಿನ ಚುನಾವಣೆಗಳಲ್ಲಿ ಬಳಸಲಾಗಿದ್ದ ಇವಿಎಂಗಳನ್ನು ತಿರುಚಲಾಗಿತ್ತು ಎಂಬ ಆರೋಪವನ್ನು ರುಜುವಾತು ಗೊಳಿಸಲು ಪ್ರಾತ್ಯಕ್ಷಿಕೆ ನೀಡುವಂತೆ ರಾಜಕೀಯ ಪಕ್ಷಗಳಿಗೆ ಸವಾಲಿನ ಕುರಿತು ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದ್ದರು.

2009ರಲ್ಲಿ ಆಯೋಗವು ದಿಲ್ಲಿಯ ವಿಜ್ಞಾನ ಭವನದಲ್ಲಿ ಇಂತಹುದೇ ಸವಾಲನ್ನು ರಾಜಕೀಯ ಪಕ್ಷಗಳಿಗೆ ಒಡ್ಡಿದ್ದು, ಇವಿಎಂನಲ್ಲಿ ಕೈವಾಡವನ್ನು ರುಜುವಾತು ಮಾಡಲು ಯಾವುದೇ ಪಕ್ಷಕ್ಕೆ ಸಾಧ್ಯವಾಗಿರಲಿಲ್ಲ. ಆ ವೇಳೆ ದೇಶದ ವಿವಿಧೆಡೆಗಳಿಂದ 100 ಇವಿಎಂಗಳನ್ನು ವಿಜ್ಞಾನ ಭವನಕ್ಕೆ ತರಲಾಗಿತ್ತು.

ಶನಿವಾರ ಮಧ್ಯಾಹ್ನ ಕರೆಯಲಾಗಿರುವ ಸುದ್ದಿಗೋಷ್ಠಿಗೆ ಮುನ್ನ ಇವಿಎಂ ಮತ್ತು ಮತದಾನ ದೃಢೀಕರಣ ಯಂತ್ರಗಳ ಪ್ರಾತ್ಯಕ್ಷಿಕೆಯನ್ನೂ ಆಯೋಗವು ಏರ್ಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News