×
Ad

ತಡೆಬೇಲಿ ಕಿತ್ತೆಸೆದು ಸರಕಾರಿ ಗಡಿ ಗುರುತು ನಾಶ: ಡಿಸಿಗೆ ದೂರು

Update: 2017-05-19 20:15 IST

ಪಡುಬಿದ್ರೆ, ಮೇ 19: ತಡೆಬೇಲಿ ಕಿತ್ತೆಸೆದು ಸರಕಾರಿ ಗಡಿ ಗುರುತು ನಾಶ ಮಾಡಿದ ಖಾಸಗಿ ವ್ಯಕ್ತಿಯ ವಿರುದ್ಧ ಪಡುಬಿದ್ರೆ ಗ್ರಾಪಂ ವ್ಯಾಪ್ತಿಯ ನಡ್ಸಾಲು ಗ್ರಾಮದ ಸರಕಾರಿ ಜಾಗದಲ್ಲಿ ಕಳೆದ ಮೂರೂವರೆ ದಶಕಗಳಿಂದ ವಾಸ್ತವ್ಯವಿರುವ ಲಲಿತಾ ಎಂಬವರ ಮಗ ಉಡುಪಿ ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ.

ಸರಕಾರಿ ಜಾಗದಲ್ಲಿರುವ ಅವರು ಹಕ್ಕುಪತ್ರಕ್ಕಾಗಿ ಅಕ್ರಮ-ಸಕ್ರಮ, 94ಸಿ ಕಲಂ ಅಡಿ ಅರ್ಜಿ ಸಲ್ಲಿಸಿದ್ದರು. ಅದರಂತೆ ತಹಶೀಲ್ದಾರ್ ಮಹೇಶ್ಚಂದ್ರ ಕಂದಾಯ ನಿರೀಕ್ಷಕರು, ಸರ್ವೇಯರ್, ಗ್ರಾಪಂ ಸಿಬ್ಬಂದಿ ನಡ್ಸಾಲು ಗ್ರಾಮದ ಸರಕಾರಿ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿ ಸರ್ವೇ ಕಾರ್ಯವನ್ನು ನಡೆಸಿ ಗಡಿಗುರುತು ಹಾಕಿದ್ದರು.

ಇದೇ ಸ್ಥಳಕ್ಕೆ ಶಾಸಕ ವಿನಯ್ ಕುಮಾರ್ ಸೊರಕೆ ಕೂಡ ಭೇಟಿ ನೀಡಿ ಪರಿಶೀಲಿಸಿ ಮರುಸರ್ವೇ ನಡೆಸಲು ಅಕ್ರಮ-ಸಕ್ರಮ ಬೈಠಕ್‌ನಲ್ಲಿ ಆದೇಶಿಸಿದ್ದರು. ಈ ಜಾಗಕ್ಕೆ ಅಕ್ರಮ ಪ್ರವೇಶಗೈದ ಅವರಾಲು ಮಟ್ಟುವಿನ ಲೋಕೇಶ್ ಶೆಟ್ಟಿ ಹಾಗೂ ಇತರರು ಜಾಗದ ಗಡಿಯಲ್ಲಿದ್ದ ಕಲ್ಲು, ತಗಡು ಶೀಟುಗಳಿದ್ದ ತಡೆಬೇಲಿಯನ್ನು ಕಿತ್ತು ಹಾಕಿ ಗಡಿ ಗುರುತು ನಾಶ ಮಾಡಿದ್ದಾರೆ ಎಂದು ದೂರಲಾಗಿದೆ.

ಈ ಬಗ್ಗೆ ಸಲ್ಲಿಕೆಯಾದ ದೂರಿನಂತೆ ಎಸ್ಪಿ ಕೆ.ಟಿ.ಬಾಲಕೃಷ್ಣ ಪಡುಬಿದ್ರೆ ಠಾಣೆಯ ಎಸ್ಸೈ ಸತೀಶ್ ಅವರಿಗೆ ಸೂಚನೆ ನೀಡಿದ್ದು, ಅದರಂತೆ ಎಸ್ಸೈ ಘಟನಾ ಸ್ಥಳಕ್ಕೆ ಭೇಟಿ ನೀಡಿ ನಡೆದ ಕೃತ್ಯ ಪರಿಶೀಲಿಸಿದರು.

ಲೋಕೇಶ್ ಶೆಟ್ಟಿ ಯನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ ಎಸ್ಸೈ, ಮುಂದಿನ 7 ದಿನದೊಳಗೆ ತಮಗೆ ಸೇರಿದ ಖಾಸಗಿ ಜಾಗದ ಸರ್ವೇ ನಡೆಸಿ ಗಡಿಗುರುತು ಹಾಕಿಕೊಳ್ಳಬೇಕು. ಕಿತ್ತು ಹಾಕಿರುವ ಗಡಿಕಲ್ಲು, ತಡೆಬೇಲಿಯನ್ನು ಕೂಡಲೇ ಮರು ನಿರ್ಮಿಸಿ ಕೊಡ ಬೇಕು ಎನ್ನುವ ಮುಚ್ಚಳಿಕೆಯನ್ನು ಬರೆಯಿಸಿಕೊಂಡರು. ‘ಒಂದು ವೇಳೆ ತನ್ನ ಖಾಸಗಿ ಜಾಗವಲ್ಲದೆ ಸರಕಾರಿ ಜಾಗದಿಂದ ಸೊತ್ತು ಗಳನ್ನು ನಾಶಪಡಿಸಿದ್ದೇ ಆದಲ್ಲಿ ಜಿಲ್ಲಾಧಿಕಾರಿಗಳು, ತಹಶೀಲ್ದಾರರಿಗೆ ನೀಡಿದ ಲಿಖಿತ ದೂರಿನಂತೆ ದಂಡಾಧಿಕಾರಿಗಳು ಮುಂದಿನ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರುದಾರರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News