ಜಿಎಸ್‌ಟಿ: ಸೇವಾ ತೆರಿಗೆ ದರಗಳು ಅಂತಿಮ
ಶ್ರೀನಗರ,ಮೇ 19: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ಶುಕ್ರವಾರ ಸೇವಾ ತೆರಿಗೆಗಳನ್ನು ಅಂತಿಮಗೊಳಿಸಿದೆ. ಶಿಕ್ಷಣ ಮತ್ತು ಆರೋಗ್ಯ ರಕ್ಷಣೆ ಕ್ಷೇತ್ರಗಳಿಗೆ ಜಿಎಸ್‌ಟಿ ವ್ಯವಸ್ಥೆಯಿಂದ ವಿನಾಯಿತಿ ನೀಡಲಾಗಿದೆ.
ನೂತನ ಮಾರಾಟ ತೆರಿಗೆ ವ್ಯವಸ್ಥೆಯಡಿ ದೂರಸಂಪರ್ಕ, ವಿಮೆ, ಹೋಟೆಲ್ ಮತ್ತು ರೆಸ್ಟೋರಂಟ್‌ಗಳು ಸೇರಿದಂತೆ ಸೇವೆಗಳಿಗೆ ಅನ್ವಯಿಸುವ ನಾಲ್ಕು ತೆರಿಗೆ ದರಗಳನ್ನು ಅಂತಿಮಗೊಳಿಸಲಾಗಿದೆ. ಜಿಎಸ್‌ಟಿ ವ್ಯವಸ್ಥೆಯು ಜುಲೈ 1ರಿಂದ ಜಾರಿಗೊಳ್ಳಲಿದೆ ಎಂದು ವಿತ್ತಸಚಿವ ಅರುಣ್ ಜೇಟ್ಲಿ ಅವರು ಇಲ್ಲಿ ಜಿಎಸ್‌ಟಿ ಮಂಡಳಿಯ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಸರಕುಗಳಿಗೆ ಅನ್ವಯಿಸುವ ತೆರಿಗೆ ದರಗಳಿಗೆ ಅನುಗುಣವಾಗಿ ಶೇ.5, ಶೇ.12, ಶೇ.18 ಮತ್ತು ಶೇ.28 ಸೇವಾತೆರಿಗೆಗಳನ್ನು ನಿಗದಿಗೊಳಿಸಲಾಗಿದೆ. ದೂರಸಂಪರ್ಕ ಮತ್ತು ಹಣಕಾಸು ಸೇವೆಗಳಿಗೆ ಶೇ.18ರಷ್ಟು ಮತ್ತು ಸಾರಿಗೆ ಸೇವೆಗಳಿಗೆ ಶೇ.5ರಷ್ಟು ತೆರಿಗೆಯನ್ನು ವಿಧಿಸಲಾಗುವುದು ಎಂದರು.
ಚಿನ್ನದ ಮೇಲೆ ತೆರಿಗೆ ದರವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಮಂಡಳಿಯು ಜೂ.3ರಂದು ಮತ್ತೆ ಸಭೆ ಸೇರಲಿದೆ.
ನೂತನ ತೆರಿಗೆ ದರಗಳು ರೆಸ್ಟೋರಂಟ್ ಭೇಟಿ, ಸಿನಿಮಾ ವೀಕ್ಷಣೆ, ಸಲೂನ್‌ನಿಂದ ಹಿಡಿದು ಫೋನ್ ಬಿಲ್‌ಗಳವರೆಗೆ ಪ್ರತಿಯೊಂದರ ಮೇಲೂ ಪರಿಣಾಮ ಬೀರಲಿವೆ. ರಸ್ತೆ, ರೈಲು ಮತ್ತು ವಿಮಾನ ಸಾರಿಗೆ ಶೇ.5ರ ತೆರಿಗೆ ಹಂತದ ವ್ಯಾಪ್ತಿಯಲ್ಲಿ ಬರಲಿವೆ. ಏಸಿ ಸೌಲಭ್ಯವಿಲ್ಲದ ರೆಸ್ಟೋರಂಟ್‌ಗಳಿಗೆ ಶೇ.12 ಮತ್ತು ಏಸಿ ಸೌಲಭ್ಯ ಹೊಂದಿರುವ ರೆಸ್ಟೋರಂಟ್‌ಗಳಿಗೆ ಶೇ.18 ತೆರಿಗೆಯನ್ನು ವಿಧಿಸಲಾಗುವುದು. 2500 ರೂ-5000 ರೂ.ಶುಲ್ಕ ವಿಧಿಸುವ ಹೋಟೆಲ್‌ಗಳಿಗೆ ಶೇ.18 ಮತ್ತು 5,000 ರೂ.ಗಿಂತ ಹೆಚ್ಚಿನ ಶುಲ್ಕದ ಹೋಟೆಲ್‌ಗಳಿಗೆ ಶೇ.28 ಜಿಎಸ್‌ಟಿ ವಿಧಿಸಲಾಗುವುದು. ಆದರೆ 1,000 ರೂ.ಗಿಂತ ಕಡಿಮೆ ಶುಲ್ಕವಿರುವ ಹೋಟೆಲ್‌ಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ.
ಹಾಲಿ ಶೇ.15ರಷ್ಟು ತೆರಿಗೆ ಹೊಂದಿರುವ ಸೇವೆಗಳು ಜು.1ರಿಂದ ಶೇ.18 ತೆರಿಗೆ ವ್ಯಾಪ್ತಿಗೆ ಬರಲಿವೆ. ಆದರೆ ಸೇವೆಗಳಿಗಾಗಿ ಬಳಸಲಾದ ಸರಕುಗಳಿಗಾಗಿ ತೆರಿಗೆ ಕಡಿತ ಸೌಲಭ್ಯವಿರುವುದರಿಂದ ನಿಜವಾದ ತೆರಿಗೆ ಕಡಿಮೆಯಾಗಲಿದೆ ಎಂದು ಮಂಡಳಿಯ ಸದಸ್ಯರಾದ ಕೇರಳ ವಿತ್ತಸಚಿವ ಥಾಮಸ್ ಇಸಾಕ್ ಅವರು ಜಿಎಸ್‌ಟಿ ಮಂಡಳಿ ಸಭೆಯ ಬಳಿಕ ತಿಳಿಸಿದರು. ಐಷಾರಾಮಿ ಸೇವೆಗಳು ಗರಿಷ್ಠ ಶೇ.28 ತೆರಿಗೆ ದರಕ್ಕೊಳ ಪಡುತ್ತವೆ ಎಂದರು.
ಮಂಡಳಿಯು ಗುರುವಾರ 1,211 ಸರಕುಗಳ ತೆರಿಗೆ ದರಗಳಿಗೆ ಒಪ್ಪಿಗೆ ನೀಡಿತ್ತು. ಈ ಪೈಕಿ ಶೇ.5ರಷ್ಟು ಸರಕುಗಳಿಗೆ ವಿನಾಯಿತಿ ಲಭಿಸಿದ್ದರೆ, ಶೇ.14ರಷ್ಟು ಸರಕುಗಳು ಶೇ.5, ಶೇ.17ರಷ್ಟು ಸರಕುಗಳು ಶೇ.12, ಶೇ.43ರಷ್ಟು ಸರಕುಗಳು ಶೇ.18 ಮತ್ತು ಶೇ.19ರಷ್ಟು ಸರಕುಗಳು ಗರಿಷ್ಠ ಶೇ.28 ತೆರಿಗೆಯನ್ನು ಆಕರ್ಷಿಸಲಿವೆ.
ದೂರಸಂಪರ್ಕ ಸೇವೆಗಳಿಗೆ ಈಗಿನ ತೆರಿಗೆ ದರಗಳೇ ಮುಂದುವರಿಯಲಿವೆ ಎಂದು ಇಸಾಕ್ ತಿಳಿಸಿದರು.
ಒಟ್ಟಾರೆಯಾಗಿ ಶೇ.81ರಷ್ಟು ಸರಕುಗಳು ಶೇ.18 ಅಥವಾ ಕಡಿಮೆ ತೆರಿಗೆಯನ್ನು ಆಕರ್ಷಿಸಲಿವೆ ಮತ್ತು ಶೇ.19ರಷ್ಟು ಸರಕುಗಳು ಶೇ.28 ತೆರಿಗೆಗೊಳಪಡುತ್ತವೆ.