×
Ad

ಕಾಪು ಕ್ಷೇತ್ರದ ಫಲಾನುಭವಿಗಳಿಗೆ ಸಹಾಯಧನ ಸೌಲಭ್ಯ ವಿತರಣೆ

Update: 2017-05-19 21:27 IST

ಉಡುಪಿ, ಮೇ 19: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಶ್ರಮಶಕ್ತಿ, ಸ್ವಾವಲಂಬನಾ, ಮೈಕ್ರೋ ಕಿರುಸಾಲ ಯೋಜನೆಯಡಿ ಕಾಪು ವಿಧಾನಸಭಾ ಕ್ಷೇತ್ರದ ಒಟ್ಟು 951 ಫಲಾನುಭವಿಗಳಿಗೆ 96.16 ಲಕ್ಷ ರೂ. ಸಾಲ ಹಾಗೂ ಸಹಾಯಧನ  ಸೌಲಭ್ಯ ವನ್ನು ಕಾಪು ಶಾಸಕ ವಿನಯ ಕುಮಾರ್ ಸೊರಕೆ ಅಧ್ಯಕ್ಷತೆಯಲ್ಲಿ ಗುರುವಾರ ಶಿರ್ವ ಸಾವು್ ಚರ್ಚ್ ಹಾಲ್‌ನಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸೊರಕೆ, ರಾಜ್ಯ ಸರಕಾರ ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣಕ್ಕಾಗಿ ಜಾರಿಗೊಳಿಸುವ ಯೋಜನೆಗಳನ್ನು ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲಾಗುತ್ತಿದ್ದು ಈ ನಿಟ್ಟಿನಲ್ಲಿ ವಿವಿಧ ಯೋಜನೆಗಳಡಿ 1278 ಫಲಾನುಭವಿಗಳಿಗೆ 225.10 ಲಕ್ಷ ರೂ.ಗಳು ಅನುದಾನ ಬಿಡುಗಡೆಯಾಗಿದೆ ಎಂದರು.

 ಕಾರ್ಯಕ್ರಮವನ್ನು ರಾಜ್ಯಸಭಾ ಸದಸ್ಯ ಆಸ್ಕರ್ ಪೆರ್ನಾಂಡೀಸ್ ಜ್ಯೋತಿ ಉದ್ಘಾಟಿಸಿದರು. ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ.ವಂ. ಜೆರಾಲ್ಡ್ ಐಸಾಕ್ ಲೋಬೋ ಶುಭಾಶಂಸನೆಯನ್ನು ಮಾಡಿದರು. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ ಗಪೂರ್ ನಿಗಮದ ಪ್ರಮುಖ ಯೋಜನೆಗಳ ಮಾಹಿತಿ ನೀಡಿದರು.

ಉಡುಪಿ ಧರ್ಮಪ್ರಾಂತದ ಅಧ್ಯಕ್ಷ ಅ.ವಂ. ಜೆರಾಲ್ಡ್ ಐಸಾಕ್ ಲೋಬೋ ಶುಭ ಆರೈಸಿದರು.  ಸಮಾರಂಭದಲ್ಲಿ ಮೈಕ್ರೋ ಕಿರುಸಾಲದ 60 ಸ್ವ-ಸಹಾಯ ಗುಂಪುಗಳು, ಶ್ರಮಶಕ್ತಿ, ಸ್ವಾವಲಂಬನಾ ಯೋಜನೆಯಡಿ ಸೇರಿ ಒಟ್ಟು 951 ಫಲಾನುಭವಿಗಳಿಗೆ 96.16 ಲಕ್ಷ.ರೂ -ಇದರಲ್ಲಿ 48.08 ಲಕ್ಷ ರೂ ಸಹಾಯ ಧನ ಮತ್ತು 48.08 ಲಕ್ಷರೂ ಸಾಲ ಸೌಲಭ್ಯವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ವಿಲ್ಸನ್ ರೋಡ್ರಿಗಸ್, ಶಿರ್ವ ಗ್ರಾಪಂ ಅಧ್ಯಕ್ಷೆ ವಾರಿಜ ಪೂಜಾರ್ತಿ, ಕಾಪು ಪುರಸಭೆ ಉಪಾಧ್ಯಕ್ಷ ಉಸ್ಮಾನ್, ಶಿರ್ವ ಚರ್ಚ್‌ನ ಧರ್ಮ ಗುರುಗಳಾದ ವಂ. ಸ್ಟೇನಿ ತಾವ್ರೋ, ಸ್ಥಳೀಯ ತಾಪಂ ಸದಸ್ಯೆ ಗೀತಾ ವಾಗ್ಲೆ, ಕ್ರಿಶ್ಚಿಯನ್ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರಶಾಂತ್ ಜತ್ತನ್ನ, ಕೆಡಿಪಿ ಜಿಪಂ ನಾಮ ನಿರ್ದೇಶಿತ ಸದಸ್ಯ ಇಗ್ನೇಷಿಯಸ್ ತಾವ್ರೋ, ಸ್ಥಳೀಯ ಪ್ರಮುಖರಾದ ಲೀನಾ ಮಚಾದೋ, ಗಿರೀಶ್ ಉದ್ಯಾವರ, ಅಮೀರ್ ಮೊಹಮ್ಮದ್, ವಿಲ್ಸನ್ ಡಿಸೋಜಾ, ಅಬ್ದುಲ್ಲಾ ಕಾಪು ಉಪಸ್ಥಿತರಿದ್ದರು.
ನಿಗಮದ ಜಿಲ್ಲಾ ವ್ಯವಸ್ಥಾಪಕ ಶ್ರೀಧರ ಭಂಡಾರಿ ಸ್ವಾಗತಿಸಿ, ಗಿಲ್ಬರ್ಟ್ ಪಿಂಟೋ ಕಾರ್ಯಕ್ರಮ ನಿರ್ವಹಿಸಿದರು. ಮೆಲ್ವಿನ್ ಅರಾನ್ಹ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News