×
Ad

ಕುಂದಾಪುರ: ಗಾಳಿ, ಸಿಡಿಲಿನ ಆರ್ಭಟಕ್ಕೆ ಲಕ್ಷಾಂತರ ರೂ. ಹಾನಿ

Update: 2017-05-19 21:52 IST

 ಮೇ 19: ಜಿಲ್ಲೆಯಾದ್ಯಂತ ಕುಡಿಯುವ ನೀರು, ತಡೆಯಲಾರದ ಸೆಕೆ, ಬಿಸಿಗಾಳಿಯಿಂದ ಜನತೆ ಕಂಗೆಟ್ಟಿರುವಂತೆ ರಾತ್ರಿ ಗುಡುಗು, ಸಿಡಿಲು ಹಾಗೂ ಗಾಳಿಯೊಂದಿಗೆ ಧಾರಾಕಾರ ಮಳೆ ಸುರಿದಿದ್ದು, ಇದರಿಂದ ಜಿಲ್ಲೆಯಾದ್ಯಂತ ಸೊತ್ತುಗಳಿಗೆ ಅಪಾರ ಪ್ರಮಾಣದ ಹಾನಿಯಾಗಿರುವ ಬಗ್ಗೆ ವರದಿಯಾಗಿದ್ದು, ಕುಂದಾಪುರ ತಾಲೂಕಿನಲ್ಲಿ ಐದು ದನಗಳು ಸಿಡಿಲಿನಿಂದ ಮೃತಪಟ್ಟಿವೆ.

ರಾತ್ರಿ ಸುಮಾರು ಎರಡರಿಂದ ಮೂರು ಗಂಟೆಯ ಸುಮಾರಿಗೆ ಭಾರೀ ಗಾಳಿಯೊಂದಿಗೆ ಪ್ರಾರಂಭಗೊಂಡ ಮಳೆ ಬೆಳಗಿನ ಜಾವ ಐದು ಗಂಟೆಯವರೆಗೂ ಸುರಿಯಿತು. ಈ ನಡುವೆ ಗುಡುಗು-ಸಿಡಿಲು ಜಿಲ್ಲೆಯಾದ್ಯಂತ ಆರ್ಭಟಿಸಿದರೂ, ಕುಂದಾಪುರ ತಾಲೂಕಿನಲ್ಲಿ ಅಪಾರ ಪ್ರಮಾಣದ ನಷ್ಟಕ್ಕೆ ಕಾರಣವಾಯಿತು. ಈ ನಡುವೆ ಜಿಲ್ಲೆಯಾದ್ಯಂತ ವಿದ್ಯುತ್ ಸಹ ಕೈಕೊಟ್ಟಿದ್ದು, ಇಂದು ಬೆಳಗ್ಗೆ ಹೆಚ್ಚಿನ ಕಡೆಗಳಲ್ಲಿ ವಿದ್ಯುತ್ ಮರಳಿ ಬಂತು. ಉಡುಪಿ ಜಿಲ್ಲೆಯಲ್ಲಿ ಇಂದು ಸರಾಸರಿ 32.4 ಮಿ.ಮೀ. ಮಳೆಯಾಗಿದ್ದು, ಉಡುಪಿಯಲ್ಲಿ 21.3ಮಿ.ಮೀ., ಕುಂದಾಪುರದಲ್ಲಿ 42.7 ಮಿ.ಮೀ. ಹಾಗೂ ಕಾರ್ಕಳದಲ್ಲಿ 33.1ಮಿ.ಮೀ. ಮಳೆ ಸುರಿದ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್‌ರೂಮ್ ಮಾಹಿತಿ ನೀಡಿದೆ.

 ಕುಂದಾಪುರದಲ್ಲಿ ಭಾರೀ ಹಾನಿ: ಕುಂದಾಪುರ ತಾಲೂಕಿನಾದ್ಯಂತ  ಬೆಳಗಿನ ಜಾವ ಬೀಸಿದ ಭಾರೀ ಗಾಳಿ ಹಾಗೂ ಸಿಡಿಲಿಗೆ ಅಪಾರ ಪ್ರಮಾಣದ ಸೊತ್ತು ನಾಶವಾಗಿವೆ.

ಐದು ಜಾನುವಾರಗಳು ಮೃತಪಟ್ಟಿದ್ದು, ಇನ್ನು ಕೆಲವು ಗಾಯಗೊಂಡಿವೆ. ಮನೆ, ತೋಟಗಳಿಗೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ತಾಲೂಕು ಕಚೇರಿಯಿಂದ ತಿಳಿದುಬಂದಿದೆ.

ಹೆಸ್ಕತ್ತೂರಿನಲ್ಲಿ ಮುತ್ತಮ್ಮ ಶೆಡ್ತಿ ಎಂಬವರ ಮನೆಯ ಕೊಟ್ಟಿಗೆಗೆ ಸಿಡಿಲು ಬಡಿದು ಅಲ್ಲಿದ್ದ ಮೂರು ಜಾನುವಾರುಗಳು ಮೃತಪಟ್ಟಿವೆ. ಇನ್ನೊಂದು ದನ ಗಾಯಗಳೊಂದಿಗೆ ಪಾರಾಗಿದೆ. ಇದರಿಂದ ಸುಮಾರು 1.50 ಲಕ್ಷ ರೂ.ನಷ್ಟ ಸಂಭವಿಸಿರುವುದಾಗಿ ಹೇಳಲಾಗಿದೆ.

 ಅಮಾಸೆಬೈಲಿನ ಮೋಹನ ಶೆಟ್ಟಿ ಅವರ ಮನೆಯ ಕೊಟ್ಟಿಗೆಯಲ್ಲಿದ್ದ ಎರಡು ಜಾನುವಾರುಗಳು ಸಿಡಿಲಿಗೆ ಮೃತಪಟ್ಟಿದ್ದು, ಒಂದು ಲಕ್ಷ ರೂ.ಗಳಿಗೂ ಹೆಚ್ಚಿನ ನಷ್ಟದ ಅಂದಾಜು ಮಾಡಲಾಗಿದೆ. ಇಸ್ಮಾಯಿಲ್ ಎಂಬವರ ಮನೆಗೆ ಇಂದು ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಸಿಡಿಲು ಬಡಿದು ಭಾರೀ ಹಾನಿ ಸಂಭವಿಸಿದೆ. ವಿದ್ಯುತ್ ಮೀಟರ್ ಹಾಗೂ ಇಲೆಕ್ಟ್ರಾನಿಕ್ಸ್ ಉಪಕರಣಗಳು ಸುಟ್ಟು ಹೋಗಿದ್ದು ಎರಡು ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

 ಬಚ್ಚು ದೇವಾಡಿಗ ಎಂಬವರ ಮನೆಯ ತೋಟದಲ್ಲಿದ್ದ 200ಕ್ಕೂ ಅಧಿಕ ಬಾಳೆ ಗಿಡಗಳು ಗಾಳಿಯಿಂದ ಧರಾಶಾಹಿಯಾಗಿವೆ. ಅದೇ ಗ್ರಾಮದ ರಾಧಾ ಪೂಜಾರ್ತಿ ಎಂಬವರ ಮನೆಗೆ ಸಿಡಿಲು ಬಡಿದು ವಿದ್ಯುತ್ ವಯರಿಂಗ್ ಸಂಪೂರ್ಣ ಹಾನಿಗೊಳಗಾಗಿದ್ದು, 1.50 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಸೊತ್ತುಗಳಿಗೆ ಹಾನಿಯಾಗಿವೆ.
 

ಮಡಾಮಕ್ಕಿ ಗ್ರಾಮದ ಶ್ಯಾಮ ಶೆಟ್ಟಿ ತೆಂಕಬೆಪ್ಪೆ ಎಂಬವರ ಮನೆಗೆ ಸಿಡಿಲು ಬಡಿದು 15,000 ರೂ., ಹೆಮ್ಮಾಡಿಯ ಪದ್ಮಾ ಎಂಬವರ ಮನೆ ಮೇಲೆ ಮರಬಿದ್ದು ಭಾಗಶ: ಹಾನಿಯಾಗಿ 25,000ರೂ., ಸೇನಾಪುರದ ಸುನಿಲ್ ಲೋಬೊ ಎಂಬವರ ಮನೆಗೆ ಸಿಡಿಲು ಬಡಿದು 15,000ರೂ., ಮಚ್ಚಟ್ಟು ಗ್ರಾಮದ ಅಕ್ಕಯ್ಯ ಶೆಟ್ಟಿಗಾರ್ ಮನೆಯ ತೋಟಕ್ಕೆ ಅದೇ ಗ್ರಾಮದ ಪುಟ್ಟಯ್ಯ ಶೆಟ್ಟಿಗಾರ್ ಎಂಬವರ ತೋಟಕ್ಕೆ ಸಿಡಿಲು ಬಡಿದು ತಲಾ 50,000ರೂ. ಹಾನಿ ಸಂಭವಿಸಿದೆ.

ಹೆಂಗವಳ್ಳಿ ಗ್ರಾಮದ ಬಾಬಣ್ಣ ನಾಯ್ಕ ಎಂಬವರ ಮನೆಯ ಮೇಲೆ ಮರ ಬಿದ್ದು 30,000ರೂ., ಯಡಾಡಿ ಮತ್ಯಾಡಿ ಬಾಬಣ್ಣ ಮೊಗವೀರ ಮನೆಯ ಮೇಲೆ ಅಡಿಕೆ ಮರ ಬಿದ್ದು 25,000ರೂ. ಹಾನಿ ಸಂಭವಿಸಿದೆ.

ಬೇಳೂರು ಗ್ರಾಮದ ನರಸಿಂಹ ಶೆಟ್ಟಿ ಎಂಬವರ ದನದ ಕೊಟ್ಟಿಗೆ ಮೇಲೆ ತೆಂಗಿನ ಮರ ಬಿದ್ದು 50,000ರೂ. ಅದೇ ಗ್ರಾಮದ ವನಜ ಶೆಡ್ತಿ ಎಂಬವರ ದನದ ಕೊಟ್ಟಿಗೆ ಮೇಲೆ ತೆಂಗಿನ ಮರ ಬಿದ್ದು ಭಾಗಶ: ಹಾನಿಯಾಗಿದ್ದು 25,000ರೂ. ನಷ್ಟ ಸಂಭವಿಸಿದೆ.

ಮೊಳಹಳ್ಳಿ ಗ್ರಾಮದ ನರಸಿ ಎಂಬವರ ಮನೆಗೆ ಸಿಡಿಲು ಬಡಿದು 10,000ರೂ. ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
 ಉರುಳಿದ ವಿದ್ಯುತ್ ಕಂಬ: ಉಡುಪಿ ತಾಲೂಕಿನಲ್ಲಿ ಸಹ ಗಾಳಿ-ಮಳೆಗೆ ಅಲ್ಲಲ್ಲಿ ಹಾನಿಯಾಗಿರುವ ಬಗ್ಗೆ ವರದಿಗಳು ಬಂದಿವೆ. ಪರ್ಕಳದಲ್ಲಿ 5-6 ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಇದರಿಂದ ಮಣಿಪಾಲ- ಪರ್ಕಳ ಆಸುಪಾಸಿನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News