ಚೈನ್ ಕಸಿದು ಪರಾರಿಯಾಗಿದ್ದ ಮಹಿಳೆಯ ಬಂಧನ
ಮಂಗಳೂರು, ಮೇ 19: ತೊಕ್ಕೊಟಿನಿಂದ ಕಂಕನಾಡಿಗೆ ಬರುತ್ತಿದ್ದ ಬಸ್‌ವೊಂದರಲ್ಲಿ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರ ಕುತ್ತಿಗೆಯಲ್ಲಿದ್ದ ಚೈನ್ ಅನ್ನು ಎಗರಿಸಿ ಪರಾರಿಯಾಗಿದ್ದ ಮಹಿಳೆಯೋರ್ವಳನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮಹಿಳೆಯನ್ನು ತಮಿಳುನಾಡಿನ ಮೂಲದ ನಂದಿನಿ ಯಾನೆ ಉಮಾ ಯಾನೆ ಸಂಗೀತ (20) ಎಂದು ಗುರುತಿಸಲಾಗಿದೆ.
ಕಂಕನಾಡಿಯ ಅವಿನಾಶಿ ಬಸ್‌ನ ಸೀಟಿನಲ್ಲಿ ಮಗುವಿನೊಂದಿಗೆ ಕುಳಿತಿದ್ದಾಗ ಆರೋಪಿ ಸಂಗೀತ, ಅವಿನಾಶಿ ಬಳಿ ಒರಗಿ ನಿಂತಿದ್ದಳು. ಸಮಯ ನೋಡಿ ಅವಿನಾಶಿ ಅವರ ಕುತ್ತಿಗೆಗೆ ಕೈ ಹಾಕಿದ ಆರೋಪಿ ಒಂದೂವರೆ ಪವನ್ ತೂಕದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಳು.
ಆರೋಪಿ ಧರಿಸಿದ್ದ ಬಟ್ಟೆಯ ಗುರುತಿನೊಂದಿಗೆ ಕಂಕನಾಡಿ ಪೊಲೀಸರಿಗೆ ದೂರು ನೀಡಲಾಗಿತ್ತು.
ಪೊಲೀಸರು ಆಕೆಯನ್ನು ನಗರದ ಸೆಂಟ್ರಲ್ ರೈಲ್ವೇ ನಿಲ್ದಾಣದ ಬಳಿಯಿಂದ ಬಂಧಿಸಿ, ಸೊತ್ತನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.