ಉಡುಪಿ: 28.76 ಕೋಟಿ ರೂ. ವೆಚ್ಚದ 11 ರಸ್ತೆ ಕಾಮಗಾರಿಗಳಿಗೆ ಚಾಲನೆ
ಉಡುಪಿ, ಮೇ 19: ಉಡುಪಿ ವಿಧಾನಸಭಾ ಕ್ಷೇತ್ರದ ಬ್ರಹ್ಮಾವರ ಹೋಬಳಿ ಯಲ್ಲಿ ಶುಕ್ರವಾರ ಮಿಂಚಿನ ಸಂಚಾರ ನಡೆಸಿದ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಹಾಗೂ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ 28.76 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುವ 20.83 ಕಿಮೀ ಉದ್ದದ 11 ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ತಾವು ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 35.2 ಕೋಟಿ ವೆಚ್ಚದಲ್ಲಿ 57.37 ಕಿ.ಮೀ ಉದ್ದದ 26 ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದರು.
ಕ್ಷೇತ್ರ ಜನರ ಬೇಡಿಕೆಗಳಿಗೆ ಅನುಗುಣವಾಗಿ ರಸ್ತೆಗಳ ನಿರ್ಮಾಣ ಕಾರ್ಯ ಕೈಗೊಂಡಿದ್ದು, ಉತ್ತಮ ಗುಣಮಟ್ಟದ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಅಲ್ಲದೇ ಕ್ಷೇತ್ರದಲ್ಲಿ ಸಂಪರ್ಕ ರಸ್ತೆಗಳು ಹಾಗೂ ಸೇತುವೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ನಿರ್ಮಾಣಗೊಂಡಿರುವ ರಸ್ತೆಗಳ ಸಂಪೂರ್ಣ ನಿರ್ವಹಣೆಯನ್ನು ಸಂಬಂಧಿತ ಗುತ್ತಿಗೆದಾರ ಐದು ವರ್ಷಗಳ ಕಾಲ ನೋಡಿಕೊಳ್ಳಬೇಕಿದ್ದು, ನಂತರ 6ನೇ ವರ್ಷದಲ್ಲಿ ರಸ್ತೆಯ ನವೀಕರಣ ನಡೆಸಿ ಸರಕಾರಕ್ಕೆ ನೀಡಬೇಕಿದೆ. ಇದರಿಂದ ಕನಿಷ್ಠ ಕನಿಷ್ಠ 10 ವರ್ಷಗಳ ಕಾಲ ಉತ್ತಮ ಗುಣಮಟ್ಟದ ರಸ್ತೆ ಸೌಲಭ್ಯ ಕ್ಷೇತ್ರದ ಜನತೆಗೆ ದೊರೆಯಲಿದೆ ಎಂದು ಪ್ರಮೋದ್ ವಿವರಿಸಿದರು.
ಇಂದು ಗ್ರಾಮೀಣ ಭಾಗದಲ್ಲಿ 11 ರಸ್ತೆ ಕಾಮಗಾರಿ ಹಾಗೂ ಎರಡು ಸೇತುವೆ ಕಾಮಗಾರಿಗೆ ಸಚಿವರು ಗುದ್ದಲಿ ಪೂಜೆ ನೆರವೇರಿಸಿದರು. ಇವುಗಳಲ್ಲಿ 3.05 ಕೋಟಿ ರೂ.ವೆಚ್ಚದಲ್ಲಿ ಹೇರೂರು ಸಮೀಪ ರಾ.ಹೆದ್ದಾರಿ 66ರಿಂದ ಬ್ರಹ್ಮಾವರ ಕೃಷಿ ಕೇಂದ್ರದವರೆಗಿನ 2.16 ಕಿ.ಮೀ. ರಸ್ತೆ ಕಾಮಗಾರಿ, 1.67 ಕೋಟಿ ರೂ. ವೆಚ್ಚದ ಕೆಮ್ಮಣ್ಣು ಜ್ಯೋತಿ ನಗರದಿಂದ ನೇಜಾರು ರಸೆ, 2.26 ಕೋಟಿ ರೂ. ನೇಜಾರು ಜಂಗಮರಬೆಟ್ಟುನಿಂದ ನಿಡಂಬಳ್ಳಿ ಕೆಮ್ಮಣ್ಣು ರಸ್ತೆ, 2.63 ಕೋಟಿ ರೂ.ವೆಚ್ಚದ ಕೃಷಿ ಕೇಂದ್ರ ಸಮೀಪದಿಂದ ಹೇರೂರು ಶಾಲೆಯವರೆಗಿನ ರಸ್ತೆ, 2.14 ಕೋಟಿ ರೂ. ನೀಲಾವರದ ರಾಮನ್‌ಕುದ್ರು ನಿಂದ ನಂದನ್ ಕುದ್ರು ನೀಲಾವರ ಲಿಂಕ್ ರಸ್ತೆ ಕಾಮಗಾರಿಗಳು ಸೇರಿವೆ.
ಉಳಿದಂತೆ 1.84ಕೋಟಿ ರೂ.ವೆಚ್ಚದ ಬಾಯರಬೆಟ್ಟುನಿಂದ ಕಕ್ಕುಂಜೆ ಗೋರ್ಪಳ್ಳಿ ರಸ್ತೆ, 2.59 ಕೋಟಿ ರೂ. ವೆಚ್ಚದ ಸೂರುಂಟೆ ಕಂಬಲಗದ್ದೆ ಎಲ್ಲಂಪಳ್ಳಿ ರಸ್ತೆ, 1.31ಕೋಟಿ ರೂ. ಕರ್ಜೆ ಹಲುವಳ್ಳಿ ಹಿಂಕ್ಲಾಡಿ ರಸ್ತೆ, 1.81 ಕೋಟಿ ರೂ. ಸಾಸ್ತಾವು ಹಲುವಳ್ಳಿ ಕಂಗಿಬೆಟ್ಟು ರಸ್ತೆ, 1.72 ಕೋಟಿ ರೂ. ವೆಚ್ಚದ ಕೆಂಜೂರು ನಾಲ್ಕೂರುರಿಂದ ಚಪ್ಪರ್‌ಮಠ ಮೂಡಬೆಟ್ಟು ರಸ್ತೆ ಹಾಗೂ 1.59 ಕೋಟಿ ರೂ. ವೆಚ್ಚದ ಕಳತ್ತೂರು ಸೀತಾನದಿಯಿಂದ ಸಂತೆಕಟ್ಟೆ ರಸ್ತೆ ಕಾಮಗಾರಿಗಳಿಗೆ ಸಚಿವರು ಗುದ್ದಲಿ ಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ತಾಪಂ ಸದಸ್ಯೆ ಡಾ.ಸುನೀತಾ ನಾಯಕ್, ವೆರೋನಿಕಾ ಕರ್ನೇಲಿಯೊ, ಗೋಪಿ ಕೆ. ನ್‌ಕಾ, ಚಾಂತಾರು ಗ್ರಾಪಂ ಅಧ್ಯಕ್ಷೆ ಸರಸ್ವತಿ ನಾಯ್ಕಾ, ಕೆಡಿಪಿ ಸದಸ್ಯ ಉಮೇಶ್ ಚೇ ರ್ಕಾಡಿ, ಪಿಎಂಜಿಎಸ್‌ವೈ ಯೋಜನಾ ವಿಭಾಗದ ಇಂಜಿನಿಯರ್‌ಗಳಾದ ಸತೀಶ್, ವಿಜಯಾನಂದ ನಾಯಕ್, ತ್ರಿಣೇಶ್ವರ್ ಹಾಗೂ ವಿವಿಧ ಗ್ರಾಪಂಗಳ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.