ಮಾವು, ಹಲಸು ಜಿಲ್ಲೆಯ ಬಡವರ ಪ್ರಮುಖ ಆಹಾರವಾಗಿತ್ತು : ಬಿ.ರಮಾನಾಥ ರೈ

Update: 2017-05-19 18:48 GMT

   
  
   
  

ಮಂಗಳೂರು, ಮೇ19: ಮಾವು, ಹಲಸು ಜಿಲ್ಲೆಯಲ್ಲಿ ಭೂ ಸುಧಾರಣೆ ಜಾರಿಯಾಗುವವರೆಗೂ ಬಡವರ ಪ್ರಮುಖ ಆಹಾರವಾಗಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಪರಿಸರ, ಅರಣ್ಯ ಸಚಿವ ಬಿ.ರಮಾನಾಥ ರೈ ತಿಳಿಸಿದರು.

ಜಿಲ್ಲಾ ಪಂಚಾಯತ್ ತೋಟಗಾರಿಕಾ ಇಲಾಖೆ ಹಾಗೂ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವತಿಯಿಂದ ನಗರದ ಕದ್ರಿ ಪಾರ್ಕಿನಲ್ಲಿಂದು ವಿವಿಧ ಮಾವು ಹಾಗೂ ಹಲಸುಗಳ ವೈವಿಧ್ಯ ತಳಿಗಳ ಅಪೂರ್ವ ಮೇಳ ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಪರಿಸರ,ಅರಣ್ಯ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿ ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆ ಹಲವು ವರ್ಷಗಳ ಹಿಂದೆ ಹಲಸು ಬೆಳೆಯುವ ರಾಜ್ಯದ ಪ್ರಮುಖ ಜಿಲ್ಲೆಯಾಗಿತ್ತು. ಮತ್ತೆ ಜಿಲ್ಲೆಯಲ್ಲಿ ಹಲಸು ಬೆಳೆಗೆ ಮಹತ್ವ ನೀಡಬೇಕಾಗಿದೆ. ಗೇಣಿದಾರರು ಮತ್ತು ಒಕ್ಕಲುಗಳು ಇದ್ದ ಸಂದರ್ಭದಲ್ಲಿ ಬೆಳೆದ ಬೆಳೆಯನ್ನು ಗೇಣಿ ನೀಡಲು ಕೊಟ್ಟು ಭೂಮಿಯ ಹಕ್ಕಿಲ್ಲದೆ ಇದ್ದಾಗ ಹಲಸು ಬಡವರ ಪ್ರಮುಖ ಆಹಾರವಾಗಿತ್ತು. ಮಾವು ಲಾಭದಾಯಕ ತೋಟಗಾರಿಕಾ ಬೆಳೆಯಾಗಿದೆ. ಈ ಬೆಳೆಯ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ರೀತಿಯ ಮಾವು, ಹಲಸು ಮೇಳ ಮಾಡುತ್ತಿರುವುದು ಉತ್ತಮ ಪ್ರಯತ್ನ ಎಂದರು.

ಬೆಳೆಗಾರರ ನಡುವೆ ಮಧ್ಯವರ್ತಿಗಳ ವ್ಯವಹಾರಗಳಿಲ್ಲದೆ ನೇರವಾಗಿ ಮಾರಾಟ ಮಾಡುವ ವ್ಯವಸ್ಥೆ ಮೇಳದಲ್ಲಿ ನಡೆಯುತ್ತಿದೆ ಎಂದು ರಮಾನಾಥ ರೈ ತಿಳಿಸಿದರು.

ರಾಜ್ಯದಲ್ಲಿ ಶೇ 20 ಮಾವು ಬೆಳೆಗೆ ಹಾನಿ:- ರಾಜ್ಯದಲ್ಲಿ ಮಳೆಯ ಕೊರತೆಯಿಂದ ಹಾಗೂ ಅಕಾಲಿಕ ಮಳೆಯಿಂದ ಶೇ 20ರಷ್ಟು ಮಾವು ಬೆಳೆಗೆ ಹಾನಿಯಾಗಿದೆ ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಅಧ್ಯಕ್ಷ ಎಲ್.ಗೋಪಾಲಕೃಷ್ಣ ತಿಳಿಸಿದ್ದಾರೆ.

ಬೆಳೆಗಾರನಿಂದ ನೇರವಾಗಿ ಬಳಕೆದಾರನಿಗೆ ಎನ್ನುವ ದೃಷ್ಟಿಯಿಂದ ಈ ಮೇಳವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಮಾವು ಬೆಳೆಯನ್ನು ಅಭಿವೃದ್ಧಿ ಪಡಿಸಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ನಿಟ್ಟಿನಲ್ಲಿ ಮಾವು ಅಭಿವೃದ್ಧಿ ನಿಗಮ ಕಾರ್ಯಪ್ರವೃತ್ತವಾಗಿದೆ ಎಂದು ಗೋಪಾಲಕೃಷ್ಣ ತಿಳಿಸಿದರು.

ಮೇಳ ಇಂದಿನಿಂದ ಆರಂಭಗೊಂಡು ಮೇ 25ರವರೆಗೆ ನಡೆಯಲಿದೆ. ಮೇಳದಲ್ಲಿ ಚಂದ್ರ ಹಲಸು, ಸ್ವರ್ಣ ಹಲಸು, ತೂಬುಗೆರೆ ಹಲಸು, ರುದ್ರಾಕ್ಷಿ ಹಲಸು, ಸಕ್ಕರೆ ಪಟ್ನ, ಭೈರಸಂದ್ರ ಹಲಸುಗಳ ತಳಿಗಳು ಬಾದಾಮಿ, ಮಲ್ಲಿಕಾ, ಆಪೂಸು, ರಸಪೂರಿ, ನೀಲಂ,ಮಲ್ ಗೋವಾ, ನೀಲಂ,ಬಂಗನ್ ಪಳ್ಳಿ,ಸಕ್ಕರೆ ಗುತ್ತಿ,ಪಯಿರಿ ಮೊದಲಾದ ತಳಿಗಳ ಹಣ್ಣುಗಳು ಗ್ರಾಹಕರನ್ನು ಸೆಳೆದವು.

ಸಮಾರಂಭದಲ್ಲಿ ಸರಕಾರದ ಮುಖ್ಯ ಸಚೇತಕ ಐವನ್ ಡಿ ಸೋಜ, ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ, ಜಿ.ಪಂ.ಸದಸ್ಯ ಎಂ.ಎಸ್.ಮುಹಮ್ಮದ್, ಮಾವು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಕದಿರೇ ಗೌಡ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಉಮೇಶ್ , ತೋಟಗಾರಿಕಾ ಉಪನಿರ್ದೇಶಕ ಯೋಗೇಶ್ ಎಚ್.ಆರ್ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News