×
Ad

ಬಿಜೆಪಿಯ ಬರಗಾಲ ಅಧ್ಯಯನ ರಾಜಕೀಯ ಗಿಮಿಕ್: ಐವನ್ ಡಿಸೋಜ

Update: 2017-05-20 17:55 IST

ಮಂಗಳೂರು, ಮೇ 20: ಮಾಜಿ ಮುಖ್ಯಯಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಬರಗಾಲ ಅಧ್ಯಯನ ಯಾತ್ರೆಯು ಬಿಎಸ್‌ವೈ ಮತ್ತು ಕೆ.ಎಸ್. ಈಶ್ವರಪ್ಪ ಅವರನ್ನು ಒಂದು ಮಾಡುವ ತಂತ್ರ ಮತ್ತು ರಾಜಕೀಯ ಗಿಮಿಕ್ ಆಗಿದೆ. ಆ ಮೂಲಕ ಬಿಜೆಪಿ ರೈತರ ಹೆಸರು ಹೇಳಿಕೊಂಡು ರೈತರಿಗೆ ಮೋಸ ಮಾಡುತ್ತಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಆರೋಪಿಸಿದ್ದಾರೆ.

ಶನಿವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾವಾಗ ಬರ ವೀಕ್ಷಣೆಗೆ ಹೋಗಬೇಕಿತ್ತೋ ಆಗ ಹೋಗಿಲ್ಲ. ಇದೀಗ ಮಳೆಗಾಲ ಆರಂಭದಲ್ಲಿ ಕಾಟಾಚಾರಕ್ಕೆ ಬರ ವೀಕ್ಷಣೆಗೆ ತೆರಳುತ್ತಿದ್ದಾರೆ. ಬಿಎಸ್‌ವೈ ಮತ್ತು ಈಶ್ವರಪ್ಪ ನಡುವಿನ ಒಳಜಗಳ ಶಮನವಾಗಿದೆ ಎಂದು ತೋರಿಸುವ ಪ್ರಯತ್ನವಾಗಿ ರೈತರ ಹೆಸರಿನಲ್ಲಿ ಬರ ಅಧ್ಯಯನವನ್ನು ನಡೆಸುತ್ತಿದ್ದಾರೆ ಎಂದು ಆಪಾದಿಸಿದರು.

ಬರ ವೀಕ್ಷಣೆಗೆ ಹೋಗಿ ದಲಿತರ ಮನೆಯಲ್ಲಿ ತಯಾರಿಸಿದ ಊಟ ಮಾಡದೇ ಫೈವ್ ಸ್ಟಾರ್ ಹೊಟೇಲ್‌ನಿಂದ ತರಿಸಿ ತಿನ್ನುವುದು ಈ ನಾಯಕರ ಉದ್ದೇಶವನ್ನು ತಿಳಿಸುತ್ತದೆ. ದಲಿತರೇ ತಯಾರಿಸಿದ ಊಟ ಸವಿಯುತ್ತಿದ್ದರೆ ಅವರಿಗೆ ಧೈರ್ಯ ತುಂಬಿದಂತಾಗುತ್ತಿತ್ತು ಎಂದ ಐವನ್ ಡಿಸೋಜ, ರಾಜ್ಯದಲ್ಲಿ 17 ಮಂದಿ ಸಂಸದರು, ನಾಲ್ವರು ಸಚಿವರಿದ್ದಾರೆ. ಇವರ್ಯಾರಿಗೂ ಪ್ರಧಾನಿ ನರೇಂದ್ರ ಮೋದಿಯ ಬಳಿ ತೆರಳಿ ರಾಜ್ಯದ ರೈತರ ಸಾಲ ಮನ್ನಾ ಮಾಡಲು ಹೇಳುವ ಧೈರ್ಯವಿಲ್ಲ. ಆದರೆ ಇಲ್ಲಿ ಬರ ವೀಕ್ಷಣೆ ಹೆಸರಿನಲ್ಲಿ ವ್ಯರ್ಥ ಕಾಲಹರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅಮೃತ್ ವಿ. ಕದ್ರಿ, ಆಶಿತ್ ಪಿರೇರಾ, ನಾಗೇಶ್‌ಕುಮಾರ್, ವಸಂತ ಶೆಟ್ಟಿ, ಹಸನಬ್ಬ, ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News