ಚೆಸ್: ಈಶಾ ಶರ್ಮಾಗೆ ಅಂತಾರಾಷ್ಟ್ರೀಯ ಚಿನ್ನದ ಪದಕ

Update: 2017-05-20 12:27 GMT

ಬೆಳ್ತಂಗಡಿ, ಮೇ 20: ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಇಶಾ ಶರ್ಮ ಇರಾನ್‌ನಲ್ಲಿ ನಡೆದ ಏಷ್ಯಾ ಮಟ್ಟದ ಕಿರಿಯರ ವಿಭಾಗದ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ ಎಂದು ಎಸ್‌ಡಿಎಂ ಪ.ಪೂ.ಕಾಲೇಜಿನ ಪ್ರಾಚಾರ್ಯ ಪ್ರೊ. ದಿನೇಶ್ ಚೌಟ ತಿಳಿಸಿದರು.

ಅವರು, ಶನಿವಾರ ಬೆಳ್ತಂಗಡಿ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು. ಇರಾನ್‌ನಲ್ಲಿ ಮೇ. 1 ರಿಂದ 11 ರವರೆಗೆ ನಡೆದ ಏಷಿಯನ್ ಜ್ಯೂನಿಯರ್ ರ್ಯಾಪಿಡ್ ಚಾಂಪಿಯನ್ ಶಿಪ್ ಚೆಸ್ ಪಂದ್ಯಾವಳಿಯಲ್ಲಿ ಈಶಾ ಶರ್ಮಾ ಚಿನ್ನದ ಪದಕ ಪಡೆದ ಮೊದಲ ವಿದ್ಯಾರ್ಥಿನಿ ಎಂಬ ಹಿರಿಮೆಗೆ ಪಾತ್ರಾರಾಗಿದ್ದಾರೆ. ಇದಕ್ಕೂ ಮೊದಲು ಹೈದರಾಬಾದ್‌ನಲ್ಲಿ ನಡೆದ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ್ದ ಚೆಸ್ ಪಂದ್ಯಾವಳಿಯಲ್ಲಿ ಕಂಚಿನ ಪದಕವನ್ನು ಪಡೆದಿದ್ದರು. ಚೆಸ್ ಮಾತ್ರವಲ್ಲದೆ ಇಶಾ ಶರ್ಮ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಶೈಕ್ಷಣಿಕ ಸಾಧನೆಯೂ ಅತ್ಯುತ್ತಮವಾಗಿದೆ ಎಂದರು.

ಶಾರ್ಜಾ, ದುಬೈ, ಮಲೇಷಿಯಾ ಮತ್ತು ಬಾಂದ್ರಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಚೆಸ್ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಜಾಗತಿಕ ಮನ್ನಣೆ ಪಡೆದಿದ್ದಾರೆ. ಜೊತೆಗೆ ರಾಜಮಂಡ್ರಿ ಚೆನ್ನೈ, ಪಶ್ಚಿಮ ಬಂಗಾಳ, ದೆಹಲಿ, ಆಂಧ್ರಪ್ರದೇಶದಲ್ಲಿ ಆಯೋಜಿಸಲ್ಪಟ್ಟ ರಾಷ್ಟ್ರಮಟ್ಟದ ಚೆಸ್ ಕ್ರೀಡಾಕೂಟದಲ್ಲೂ ಭಾಗವಹಸಿ ಮಿಂಚಿದ್ದಾರೆ. ಕಲಬುರ್ಗಿ, ಶಿವಮೊಗ್ಗ ಮತ್ತು ಮಂಡ್ಯದಲ್ಲಿ ನಡೆದ ರಾಜ್ಯಮಟ್ಟದ ಚೆಸ್ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆಯೊಂದಿಗೆ ಗಮನ ಸೆಳೆದಿದ್ದಾರೆ ಎಂದರು.
 

ಪೂರಕ ಮಾಹಿತಿ ನೀಡಿದ ಇಶಾ ಅವರ ತಾಯಿ ಡಾ. ಶ್ರೀವಿದ್ಯಾ ಅವರು, ವುಮೆನ್ ಇಂಟರ್‌ನ್ಯಾಶನಲ್ ಮಾಸ್ಟರ್ ಆಗಿ ಆಯ್ಕೆಯಾಗಲು ಈಗಾಗಲೇ ಶಾರ್ಜಾದಲ್ಲಿ ಒಂದು ಅಂಕ( ನರ್ಮ್) ಪಡೆದಿದ್ದಾಳೆ ಮುಂದೆ ಇನ್ನೆರಡು ಅಂಕಗಳು ಸಿಕ್ಕಿದಲ್ಲಿ ಈಕೆ ಕರ್ನಾಟಕದ ಪ್ರಥಮ ಇಂಟರ್‌ನ್ಯಾಶನಲ್ ಚೆಸ್ ಮಾಸ್ಟರ್ ಆಗಲಿದ್ದಾರೆ ಎಂದರು.

 ಆರು ದೇಶಗಳ 22 ಸ್ಪರ್ಧಿಗಳು ಭಾಗವಹಿಸಿದ್ದರು. ಇವರಲ್ಲಿ 6 ಮಂದಿ ಭಾರತೀಯ ಆಟಗಾರರಿದ್ದರು. ಪ್ರಥಮ ಸ್ಥಾನ ಹಾಗೂ ತೃತೀಯ  ಸ್ಥಾನ ಭಾರತಕ್ಕೆ ಲಭಿಸಿದರೆ, ದ್ವಿತೀಯ ಸ್ಥಾನವನ್ನು ಇರಾನ್ ಪಡೆದುಕೊಂಡಿದೆ. ಆಟದ ವ್ಯವಸ್ಥೆ ಉತ್ತಮವಾಗಿತ್ತು. ಆದರೆ ಸಸ್ಯಾಹಾರಕ್ಕೆ ಸಮಸ್ಯೆಯಾಗಿತ್ತು. ಇರಾನ್‌ನ ವಸ್ತ್ರ ಸಂಹಿತೆಯನ್ನು ಪಾಲಿಸಬೇಕಾಗಿತ್ತು. ಮುಂದೆ ಗ್ರ್ಯಾಂಡ್ ಮಾಸ್ಟರ್ ಆಗಬೇಕೆಂಬ ಇಚ್ಛೆಯ್ನು ಇಶಾ ಶರ್ಮ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಎಸ್‌ಡಿಎಂ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಪ್ರೊ. ಬಾಲಭಾಸ್ಕರ್, ದೈಹಿಕ ಶಿಕ್ಷಣ ನಿರ್ದೇಶಕರಾದ ರಮೇಶ್, ಸಂದೇಶ್ ಪೂಂಜ, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರೊ. ಭಾಸ್ಕರ ಹೆಗಡೆ, ಇಶಾ ಶರ್ಮರ  ತಂದೆ ಡಾ. ಶ್ರೀಹರಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News