ಹುತಾತ್ಮ ಅರೆ ಸೇನಾ ಯೋಧರ ಕುಟುಂಬಗಳಿಗೆ ಒಂದು ಕೋ.ರೂ. ಪರಿಹಾರ: ರಾಜನಾಥ್ ಸಿಂಗ್
ನಾಥು ಲಾ(ಸಿಕ್ಕಿಂ),ಮೇ 20: ಕರ್ತವ್ಯದಲ್ಲಿದ್ದಾಗ ಸಾವನ್ನಪ್ಪುವ ಅರೆ ಸೇನಾಪಡೆಗಳ ಪ್ರತಿ ಯೋಧನ ಕುಟುಂಬಕ್ಕೂ ಒಂದು ಕೋ.ರೂ.ಪರಿಹಾರ ನೀಡಲಾಗುವುದು ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ಶನಿವಾರ ಪ್ರಕಟಿಸಿದರು.
ಅರೆ ಸೇನಾಪಡೆಗಳಲ್ಲಿನ 34,000 ಕಾನ್‌ಸ್ಟೇಬಲ್ ಹುದ್ದೆಗಳನ್ನು ಹೆಡ್ ಕಾನಸ್ಟೇಬಲ್ ಆಗಿ ಮೇಲ್ದರ್ಜೆಗೇರಿಸಲಾಗಿದೆ ಎಂದೂ ಅವರು ಘೋಷಿಸಿದರು.
ಶೇರ್‌ಥಾಂಗ್ ಗಡಿ ಠಾಣೆಯಲ್ಲಿ ಐಟಿಬಿಪಿ ಪಡೆಯ ಸೈನಿಕ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಅವರು, ಅರೆ ಸೇನಾ ಯೋಧರ ಬಲಿದಾನವನ್ನು ದೇಶವು ಪ್ರಶಂಸಿಸುತ್ತದೆ ಮತ್ತು ಅವರ ಬಗ್ಗೆ ಹೆಮ್ಮೆಯನ್ನು ಹೊಂದಿದೆ ಎಂದರು.
ನಮ್ಮ ಯೋಧರ ಬಲಿದಾನಕ್ಕೆ ಹಣದಿಂದ ಬೆಲೆ ಕಟ್ಟಲಾಗದು. ಆದರೆ ಹುತಾತ್ಮರ ಕುಟುಂಬಗಳು ಕಷ್ಟಗಳಿಗೆ ಸಿಲುಕಬಾರದು. ಆದ್ದರಿಂದ ಪ್ರತಿ ಹುತಾತ್ಮ ಅರೆ ಸೇನಾಯೋಧರ ಕುಟುಂಬಕ್ಕೂ ಒಂದು ಕೋ.ರೂ.ಪರಿಹಾರವನ್ನು ನೀಡಲಾಗುವುದು ಎಂದರು.
ಇದಕ್ಕೂ ಮುನ್ನ ಅವರು ಇಲ್ಲಿಯ ಭಾರತ-ಚೀನಾ ಗಡಿ ಠಾಣೆಗೆ ಭೇಟಿ ನೀಡಿ ಭದ್ರತಾ ಸ್ಥಿತಿಯನ್ನು ಪುನರ್‌ಪರಿಶೀಲಿಸಿದರು.