ಕಾರ್ಪೋರೇಶನ್ ಬ್ಯಾಂಕ್ ವಾರ್ಷಿಕ 561.21 ಕೋಟಿ ರೂ. ನಿವ್ವಳ ಲಾಭ
ಮಂಗಳೂರು, ಮೇ 20: ಕಾರ್ಪೋರೇಶನ್ ಬ್ಯಾಂಕ್ ನಾಲ್ಕನೆ ತ್ರೈಮಾಸಿಕ ಅಂತ್ಯದಲ್ಲಿ 159.97 ಕೋಟಿ ರೂ ಲಾಭಗಳಿಸುವುದರೊಂದಿಗೆ ಹಾಲಿ ಆರ್ಥಿಕ ವರ್ಷದಲ್ಲಿ ಒಟ್ಟು 561.21 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯ್ ಕುಮಾರ್ ಗಾರ್ಗ್ ಸುದ್ದಿ ಗೋಷ್ಠಿ ಯಲ್ಲಿಂದು ತಿಳಿಸಿದ್ದಾರೆ.
ಕಾರ್ಪೋರೇಶನ್ ಬ್ಯಾಂಕ್ 2015-16ನೆ ಸಾಲಿನಲ್ಲಿ ರೂ. 506 ಕೋಟಿ ರೂ ನಷ್ಟವನ್ನು ಹೊಂದಿತ್ತು.2016-17ನೆ ಸಾಲಿನಲ್ಲಿ 3,60,916.41 ಕೋಟಿ ಆರ್ಥಿಕ ವ್ಯವಹಾರ ನಡೆಸಿ ರೂ 2,20,559.62 ಕೋಟಿ ಠೇವಣಿ ಸಂಗ್ರಹಿಸಿ ಲಾಭಗಳಿಕೆಯೊಂದಿಗೆ ಶೇ 210.81ಆರ್ಥಿಕ ಪ್ರಗತಿಯನ್ನು ಸಾಧಿಸಿದೆ. ಇದರೊಂದಿಗೆ ಬ್ಯಾಂಕಿನ ಒಟ್ಟು ಆದಾಯ ರೂ.22,561.78 ಕೋಟಿ ರೂ.ಗೆ ತಲುಪಿದೆ. ಬ್ಯಾಂಕಿಗೆ ಬಡ್ಡಿಯ ಮೂಲಕ ಆದಾಯ 19,471.47 ಕೋಟಿ ರೂ.ಗಳಾಗಿದೆ ಎಂದು ಜಯ್ ಕುಮಾರ್ ಗಾರ್ಗ್ ತಿಳಿಸಿದ್ದಾರೆ.
ಬ್ಯಾಂಕಿನ ವತಿಯಿಂದ ಹಾಲಿ ಆರ್ಥಿಕ ವರ್ಷದಲ್ಲಿ 1,40,356.79 ಕೋಟಿ ರೂ ಸಾಲ ನೀಡಲಾಗಿದೆ. ಉಳಿತಾಯ ಖಾತೆಯಲ್ಲಿ 39,743.59ಕೋಟಿ ರೂ ಸಂಗ್ರಹವಾಗಿದೆ. ಬ್ಯಾಂಕ್ ಶಾಖೆಗಳ ಸಂಖ್ಯೆ 2,440 ರಿಂದ ರೂ. 2,501ಕ್ಕೆ ಏರಿಕೆಯಾಗಿದೆ. ಸಣ್ಣ, ಅತೀ ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಿಗಳಿಗೆ 28,798 ಕೋಟಿ ರೂ ಸಾಲ ನೀಡಲಾಗಿದೆ.
ಬ್ಯಾಂಕ್ ಮುದ್ರಾ ಯೋಜನೆಯ ಮೂಲಕ 2016-17ನೆ ಸಾಲಿನಲ್ಲಿ 1557.90ಕೋಟಿ ರೂ ಸಾಲ ನೀಡಿದೆ. ಆಧ್ಯತಾ ವಲಯಕ್ಕೆ 67,657 ಕೋಟಿ ರೂ. ಸಾಲ ನಿಡಲಾಗಿದೆ. ಹಾಲಿ ವರ್ಷದ ಅಂತ್ಯದಲ್ಲಿ ಒಟ್ಟು 3,169 ಬ್ಯಾಂಕ್ ಎಟಿಎಂ ಸ್ಥಾಪಿಸಲಾಗಿದೆ ಎಂದು ಜಯ್ ಕುಮಾರ್ ಗಾರ್ಗ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಪೋರೇಶನ್ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ ಮುರಳಿ ಭಾಗ್ವತ್, ಮಹಾ ಪ್ರಬಂಧಕ ಎಂ.ಬಿ.ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.