ಕೊಲ್ಲೂರಿನಲ್ಲಿ ಬಾಹುಬಲಿಯ ದೇವಸೇನಾ: ನಟಿಯನ್ನು ನೋಡಲು ಮುಗಿಬಿದ್ದ ಜನ
ಉಡುಪಿ, ಮೇ 20: ಬಾಹುಬಲಿ ಚಿತ್ರದ ಯಶಸ್ಸಿನ ನಂತರ ಅನುಷ್ಕಾ ಶೆಟ್ಟಿ ಕೂಡಾ ಜನ ಮಾನಸಕ್ಕೆ ಹತ್ತಿರವಾಗಿದ್ದಾರೆ. ಅದರಲ್ಲೂ ಉಡುಪಿಗೆ ಆಗಮಿಸಿದ್ದ ಈ ನಟಿ ಎಲ್ಲರ ಕುತೂಹಲದ ಕೇಂದ್ರ ಬಿಂದುವಾದರು.
ಅವರು ತಮ್ಮ ಪರಿವಾರದ ಜೊತೆ ಕರಾವಳಿಯ ಪುಣ್ಯಕ್ಷೇತ್ರ ಕೊಲ್ಲೂರಿಗೆ ತೆರಳಿ ಪೂಜೆ ಸಲ್ಲಿಸಿದರು. ಕೊಲ್ಲೂರು ಮುಕಾಂಬಿಕೆಯ ದರ್ಶನ ಪಡೆರು.
ಈ ವೇಳೆ ಬಾಹುಬಲಿಯ ದೇವಸೇನಾಳನ್ನು ನೋಡಲು ಜನ ಮುಗಿಬಿದ್ದರು. ಸುದ್ದಿಯಿಲ್ಲದೆಯೇ ಈ ನಟಿ ಕೊಲ್ಲೂರಿಗೆ ಭೇಟಿ ನೀಡಿದ್ದರು. ದಿಢೀರನೆ ನಟಿ ಕಾಣಿಸಿಕೊಂಡಿದ್ದನ್ನು ತಿಳಿದ ನೂರಾರು ಮಂದಿ ದೇವಾಲಯಕ್ಕೆ ಆಗಮಿಸಿದರು. ನಟಿ ಜೊತೆ ನಿಂತು ಫೋಟೋ ತೆಗೆಯಲು ಅನೇಕರು ಪ್ರಯತ್ನಿಸಿದ್ದರು.
ದೇವಾಲಯದ ಅಂಗಳದಲ್ಲಿ ಈ ನಟಿ ಪ್ರದಕ್ಷಿಣೆ ಬರುತ್ತಿದ್ದಂತೆ ಸುತ್ತುವರಿದ ಜನ, ತಮ್ಮ ಮೊಬೈಲ್ ಗಳಲ್ಲಿ ನಟಿಯನ್ನು ಸೆರೆ ಹಿಡಿಯುವ ಪ್ರಯತ್ನವನ್ನೂ ಮಾಡಿದರು.
ಬಾಹುಬಲಿ ಮೊದಲ ಭಾಗ ಬಿಡುಗಡೆಯಾದ ಸಂದರ್ಭದಲ್ಲೂ ಅನುಷ್ಕಾ ಶೆಟ್ಟಿ ಕೊಲ್ಲೂರಿಗೆ ಭೇಟಿ ನೀಡಿದ್ದರು. ಇದೀಗ ಬಾಹುಬಲಿ- 2 ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಅನುಷ್ಕಾ ಶೆಟ್ಟಿ ಕೊಲ್ಲೂರಿಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.